
ಬ್ರಹ್ಮಾವರ : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಬ್ರಹ್ಮಾವರ. ಇವರ ಸಹಯೋಗದೊಂದಿಗೆ ದ್ವಿತೀಯ ಸೋಪಾನ ಪರೀಕ್ಷಾ ಪಟಲಾಂ ನಾಯಕರ ತರಬೇತಿ ಶಿಬಿರ ಹಾಗೂ ವಿತೇಶ್ ಕಾಂಚನ್ ನಾಯಕತ್ವದ ಪ್ರಾಯೋಜಕತ್ವದಲ್ಲಿ ಉಚಿತ ಯುನಿಟ್ ಕಿಟ್ ವಿತರಣಾ ಕಾರ್ಯಕ್ರಮ ದಿನಾಂಕ ಜನವರಿ ೩೧ ಹಾಗೂ ಫೆಬ್ರವರಿ ೧ ರಂದು ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು÷ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪಡೆದುಕೊಂಡ ಅನುಭವಗಳನ್ನು ಜೀವನದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಸ್ತು, ಸಹಬಾಳ್ವೆ, ಪರೋಪಕಾರ ಮುಂತಾದ ಸದ್ಗುಣಗಳನ್ನು ಇಂತಹ ತರಬೇತಿಯಿಂದ ಕಲಿತು ಉತ್ತಮ ಪ್ರಜೆಗಳಾಗಬೇಕು ಎಂದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಕೆ. ಅಶೋಕ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿತೇಶ್ ಕಾಂಚನ್ರವರು ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳ ಮಹತ್ವ ಹಾಗೂ ಶಿಬಿರದ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಸ್ಕೌಟ್ಸ್ ಗೈಡ್ಸ್ ಪಠ್ಯ ಚಟುವಟಿಕೆಗಳ ಕುರಿತು ಸವಿವರವಾಗಿ ತಿಳಿಸಿದರು.

ಸಂಜೆಯ ಭವ್ಯ ಶಿಬಿರಾಗ್ನಿ ಕಾರ್ಯಕ್ರಮವನ್ನು ಜಿ ಎಮ್ ಗ್ಲೋಬಲ್ ಸ್ಕೂಲ್ನ ಆಡಳಿತ ನಿರ್ದೇಶಕರಾದ ಪ್ರಣವ್ ಶೆಟ್ಟಿಯವರು ಉದ್ಘಾಟಿಸಿದರು ಹಾಗೂ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಿಬಿರದ ಎರಡನೇ ದಿನವು ಮುಂಜಾನೆ ದೈಹಿಕ ವ್ಯಾಯಾಮದೊಂದಿಗೆ ಪ್ರಾರAಭವಾಯಿತು. ತದನಂತರ ಸರ್ವ ಧರ್ಮ ಪ್ರಾರ್ಥನೆ ಹಾಗೂ ಧ್ವಜಾರೋಹಣ ನೆರವೇರಿಸಲಾಯಿತು. ಅಗ್ನಿಶಾಮಕ ದಳದವರು ಅಗ್ನಿ ದುರಂತದ ಸಂದರ್ಭದಲ್ಲಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನಡೆಸಿದರು. ಎರಡು ದಿನಗಳ ಕಾಲ ನಡೆದ ಕೌಶಲ್ಯಾಧಾರಿತ ಶಿಬಿರದಲ್ಲಿ ಶಿಸ್ತು, ನಾಯಕತ್ವ, ತಂಡಕಾರ್ಯ ಮತ್ತು ಸ್ವಾವಲಂಬನೆಯ ಕುರಿತು ತರಬೇತಿ ನೀಡಲಾಯಿತು. ಶಿಬಿರವು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಸಹಾಯಕವಾಯಿತು. ಶಿಬಿರದಲ್ಲಿ ೩೦೦ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು. ೧೫ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹಿರಿಯರಾದ ಶೇಡಿಕೊಡ್ಲು ವಿಠಲ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಬಿರದಲ್ಲಿ ಪಡೆದುಕೊಂಡ ಶಿಸ್ತು, ಪಾಠಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಶಿಬಿರದ ಯಶಸ್ಸಿಗೆ ಕಾರಣಿಕರ್ತರಾದ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರನ್ನು ಗೌರವಿಸಲಾಯಿತು. ಶಾಲಾ ಸಂಚಾಲಕರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಶ್ರೀ ಶೇಡಿಕೂಡ್ಲು ವಿಠಲ ಶೆಟ್ಟಿಯವರು ಶಿಬಿರದಲ್ಲಿ ಪ್ರಮಾಣ ಪತ್ರ ವಿತರಿಸಿದರು. ಜಿ ಎಂ ನ ಗೈಡ್ ಶಿಕ್ಷಕಿಯಾದ ಗಾಯತ್ರಿ ಸ್ವಾಗತಿಸಿ, ಶಿಕ್ಷಕಿ ಸ್ಮಿತಾ ವಂದಿಸಿದರು. ರೂಪಶ್ರೀ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಧ್ವಜ ಅವರೋಹಣದೊಂದಿಗೆ ಶಿಬಿರವು ಮುಕ್ತಾಯಗೊಂಡಿತು.





















































































































