
ಮಂಗಳೂರಿನ ಖ್ಯಾತ ಹೋಮಿಯೋಪಥಿ ವೈದ್ಯ ಹಾಗೂ ಸಮಾಜಮುಖಿ ಆರೋಗ್ಯ ಕಾರ್ಯಕರ್ತರಾದ ಡಾ. ಪ್ರವೀಣ್ ಕುಮಾರ್ ರೈ ಅವರಿಗೆ ಆಯುಷ್ ಹಬ್ಬ – 2026 ರ ಅಂಗವಾಗಿ ಪ್ರತಿಷ್ಠಿತ ‘ಆಯುಷ್ ಯುವಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಗೌರವ ಸಮಾರಂಭವು ಫೆಬ್ರವರಿ 1 ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು. ಪ್ರಗತಿಪರ ಕೃಷಿಕ ಹಾಗೂ ಸಮಾಜಮುಖಿ ಮುಂದಾಳುವಾಗಿದ್ದ ಕೊಳ್ತಿಗೆ ಗ್ರಾಮದ ದಿವಂಗತ ಪಾಂಬಾರು ಸುಬ್ಬಣ್ಣ ರೈ ಹಾಗೂ ಹೇಮಾವತಿ ಎಸ್. ರೈ ದಂಪತಿಗಳ ಪುತ್ರರಾದ ಡಾ. ಪ್ರವೀಣ್ ಕುಮಾರ್ ರೈ, ‘ಆರೋಗ್ಯಕರ ಜಗತ್ತಿಗಾಗಿ ಹೋಮಿಯೋಪಥಿ’ ಎಂಬ ಧ್ಯೇಯದೊಂದಿಗೆ ಹೋಮಿಯೋಪಥಿ ಚಿಕಿತ್ಸೆಯನ್ನು ಕಟ್ಟ ಕಡೆಯ ಸ್ತರದ ಜನರಿಗೂ ತಲುಪಿಸುವ ಉದ್ದೇಶದಿಂದ ಕಳೆದ ಹದಿನಾರು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಬೆಂದೂರವೆಲ್ ನ ಡಾ. ರೈ’ಸ್ ಹೋಮಿಯೋಪಥಿ ಸೆಂಟರ್ ನಲ್ಲಿ ಮುಖ್ಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು, ದೂರದ ಕಾರವಾರದಲ್ಲಿ ಕೂಡ ಶಾಖೆಯನ್ನು ಹೊಂದಿದ್ದು ಹಾಗೂ ತಮ್ಮ ಹುಟ್ಟೂರಲ್ಲಿ ಪುತ್ತೂರಿ ಸಿಟಿ ಆಸ್ಪತ್ರೆಯಲ್ಲಿ ಪ್ರತೀ ತಿಂಗಳ ನಾಲ್ಕನೇ ಶನಿವಾರದಂದು ಕಳೆದ 10 ವರ್ಷದಿಂದ ನಿಯಮಿತವಾಗಿ ಸಲಹಾ ಸೇವೆ ನೀಡುತ್ತಿದ್ದು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ನಿರಂತರ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಈ ಮಾನವೀಯ ಸೇವಾ ಪಯಣದಲ್ಲಿ ಅವರು ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಿ ಸಮಾಜಮುಖಿ ಸೇವೆಯಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

ಡಾ. ಪ್ರವೀಣ್ ಕುಮಾರ್ ರೈ ಅವರು BHMS ಹಾಗೂ MD (ಮಟೀರಿಯಾ ಮೆಡಿಕಾ) ಪದವೀಧರರಾಗಿದ್ದು, ವೈದ್ಯಕೀಯ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಕರ್ನಾಟಕ ಬೋರ್ಡ್ ಆಫ್ ಹೋಮಿಯೋಪಥಿಕ್ ಸಿಸ್ಟಮ್ ಆಫ್ ಮೆಡಿಸಿನ್ (KBHSM) ನ ಚುನಾಯಿತ ನಿರ್ದೇಶಕರಾಗಿಯೂ, ಇಂಡಿಯನ್ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ (IHMA) ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದು, ಪ್ರಸ್ತುತ IHMA ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಪ್ರಮುಖ ಸಾಧನೆಗಳಲ್ಲಿ Kudla HomeoCon – 2024 ರಾಷ್ಟ್ರ ಮಟ್ಟದ ಹೋಮಿಯೋಪಥಿ ಸಮ್ಮೇಳನದ ಕಾನ್ಫರೆನ್ಸ್ ಡೈರೆಕ್ಟರ್ ಆಗಿರುವುದು ಹಾಗೂ DECODE – 2019 ರಾಷ್ಟ್ರ ಮಟ್ಟದ ಸಮ್ಮೇಳನದ ಕಾನ್ಫರೆನ್ಸ್ ಚೇರ್ಮನ್ ಆಗಿ ಸೇವೆ ಸಲ್ಲಿಸಿರುವುದು ಗಮನಾರ್ಹ. ಕೋವಿಡ್-19 ಅವಧಿಯಲ್ಲಿ ಹೋಮಿಯೋಪಥಿ ವೈದ್ಯಕೀಯ ಸಂಘದ ಜೊತೆಗೂಡಿ 80,000ಕ್ಕೂ ಹೆಚ್ಚು ಜನರಿಗೆ ಹೋಮಿಯೋಪಥಿಕ್ ಇಮ್ಯುನಿಟಿ ಬೂಸ್ಟರ್ ವಿತರಿಸುವ ಮೂಲಕ ಅವರು ಸಮಾಜಮುಖಿ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೆ, ರೇಡಿಯೋ, ದೂರದರ್ಶನ ಚಾನೆಲ್ಗಳು ಹಾಗೂ ದಿನಪತ್ರಿಕೆಗಳ ಮೂಲಕ ಸಂದರ್ಶನಗಳನ್ನು ನೀಡಿ ಹಾಗೂ ಆರೋಗ್ಯ ಸಂಬಂಧಿತ ಲೇಖನಗಳನ್ನು ಬರೆಯುವುದರ ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿಗೆ ಅವರು ನಿರಂತರವಾಗಿ ಕೊಡುಗೆ ನೀಡುತ್ತಿದ್ದು, ಉಚಿತ ಆರೋಗ್ಯ ಶಿಬಿರಗಳು, ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಉಪನ್ಯಾಸಗಳ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣವನ್ನು ತಲುಪಿಸುತ್ತಿದ್ದಾರೆ.
ಡಾ. ಪ್ರವೀಣ್ ಕುಮಾರ್ ರೈ ಅವರಿಗೆ ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಆಯುಷ್ ವಿಭೂಷಣ ಡಾ. ಎಂ. ಮೋಹನ್ ಆಳ್ವರವರು ‘ಆಯುಷ್ ಯುವಶ್ರೀ ಪ್ರಶಸ್ತಿ’ ಪ್ರಧಾನ ಮಾಡಿ ಗೌರವಿಸಿದರು. ಸಮಗ್ರ ಆಯುಷ್ ಆರೋಗ್ಯ ಸೇವೆ, ವೃತ್ತಿಪರ ನಿಷ್ಠೆ ಹಾಗೂ ಮಾನವೀಯ ಸೇವೆಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನನ್ಯ ಕೊಡುಗೆಗೆ ದೊರೆತ ಮಹತ್ವದ ಗೌರವವಾಗಿದೆ. ಈ ಸಂದರ್ಭದಲ್ಲಿ ಸನ್ಮಾನ್ಯ ಡಾ. ಯು.ಟಿ ಖಾದರ್ ಸಭಾಧ್ಯಕ್ಷರು ಕರ್ನಾಟಕ ವಿಧಾನಸಭೆ ಇವರ ಘನ ಉಪಸ್ಥಿತಿಯೊಂದಿಗೆ, ಆಯುಷ್ ಹಬ್ಬ -26 ರ ಗೌರವಾಧ್ಯಕ್ಷೆ ಡಾ. ಆಶಾ ಜ್ಯೋತಿ ರೈ, ಅಧ್ಯಕ್ಷ ಡಾ. ಕೇಶವ ಪಿ.ಕೆ, ಸಂಘಟನಾ ಕಾರ್ಯದರ್ಶಿ ಡಾ. ಸಚಿನ್ ನಡ್ಕ, ಎಸ್ ಡಿ ಎಂ ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ಪ್ರಸನ್ನ ನರಸಿಂಹ ರಾವ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ ಮತ್ತಿತರರು ಉಪಸ್ಥಿತರಿದ್ದರು.





















































































































