
ಕರಿಕಾಡ ಸಿನಿಮಾವನ್ನು ಫೆಬ್ರವರಿ 6 ರಂದು ಕರ್ನಾಟಕ ರಾಜ್ಯದಾದ್ಯಂತ ನೂರು ಥಿಯೇಟರ್ ಗಳಲ್ಲಿ ರಿಲೀಸ್ ಮಾಡ್ತಾ ಇದ್ದೇವೆ. ನಾಯಕ ನಟನಾಗಿ ನಾನೇ ಅಭಿನಯಿಸಿದ್ದು. ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ನಟಿಸಿರುವ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಯಶ್ ಶೆಟ್ಟಿ, ರಾಜು ಬೆಳವಾಡಿ, ದಿ. ರಾಕೇಶ್ ಪೂಜಾರಿ, ಚಂದ್ರಪ್ರಭಾ ಮತ್ತಿತರರು ನಟಿಸಿದ್ದಾರೆ ಎಂದು ಚಿತ್ರದ ನಟ ಕಾಡ ನಟರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಳಸ, ಕುದ್ರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕರಿ ಅಂದ್ರೆ ಆನೆ, ಕಾಡ ಅಂದ್ರೆ ನಾಯಕನ ಹೆಸರು ಎಂದು ಮಾಹಿತಿ ನೀಡಿದರು. ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ್ ಮಾತಾಡಿ, ಸಿನಿಮಾದಲ್ಲಿ ಎಲ್ಲರೂ ಕಷ್ಟಪಟ್ಟು ನಟಿಸಿದ್ದಾರೆ. ನಾವೆಲ್ಲರೂ ಸಿನಿಮಾ ನೋಡಲು ಉತ್ಸುಕರಾಗಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು. ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕೆ. ವೆಂಕಟೇಶ್ ಮಾತಾಡಿ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು, 6 ಹಾಡುಗಳನ್ನು ನಾನೇ ಬರೆದಿದ್ದೇನೆ. ಎಲ್ಲಾ ಹಾಡುಗಳು ಕೂಡ ಚೆನ್ನಾಗಿ ಮೂಡಿಬಂದಿದ್ದು, 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಕಂಟೆಂಟ್ ಸಿನಿಮಾದಲ್ಲಿದ್ದು ಜನರು ಇಷ್ಟಪಡುವುದರಲ್ಲಿ ಎರಡು ಮಾತಿಲ್ಲ ಎಂದರು.

ನಟಿ ನಿರೀಕ್ಷಾ ಶೆಟ್ಟಿ ಮಾತಾಡಿ, ನನ್ನ ಮೊದಲ ಕನ್ನಡ ಸಿನಿಮಾ ಇದಾಗಿದೆ. ಮೊದಲನೇ ಶೋ ಮಂಗಳೂರಲ್ಲಿ ನಡೆಯುತ್ತಿರುವುದು ಇನ್ನಷ್ಟು ಖುಷಿ. ನನ್ನ ಕೆರಿಯರ್ ಗೆ ಇದು ಒಳ್ಳೆಯ ಬ್ರೇಕ್ ನೀಡುವ ವಿಶ್ವಾಸವಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ವಿತರಕ ಬಾಲಕೃಷ್ಣ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.





















































































































