ಬಂಟರು ಮತ್ತು ನಾಡವರು ಅನಾದಿ ಕಾಲದಿಂದಲೂ ಒಂದೇ ಆಗಿದ್ದಾರೆ. ಬ್ರಿಟಿಷರ ಕಾಲದ ದಾಖಲೆಗಳಲ್ಲೂ ಇದನ್ನೇ ಹೇಳಲಾಗಿದೆ. ಆನಂತರ ಬಂಟರು ಮತ್ತು ನಾಡವರನ್ನು ವಿಂಗಡಣೆ ಮಾಡಲಾಗಿದೆ. ಬಂಟರು ಮತ್ತು ನಾಡವರನ್ನು ಒಂದೇ ಕೆಟಗರಿಯಲ್ಲಿ ಸೇರಿಸುವಂತೆ ಅನೇಕ ಸಲ ಸರಕಾರಗಳ ಗಮನಕ್ಕೆ ತಂದಿದ್ದೇವೆ. ನಾನೇ ಸುಮಾರು 20 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇನೆ. ಆದರೂ ಇಲ್ಲಿಯವರೆಗೆ ಬೇಡಿಕೆ ಈಡೇರಿಲ್ಲ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ಅವರು ನಗರದ ಬಂಟ್ಸ್ ಹಾಸ್ಟೆಲ್ ನ ಅಮೃತ ಮಹೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ ವರದಿಯಲ್ಲಿ ಬಂಟರ ಹಾಗೂ ನಾಡವರ ಜನಸಂಖ್ಯೆ 3,15,000 ಇದೆ ಎಂದು ನಮೂದಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಂದಾಜು 20 ಲಕ್ಷಕ್ಕಿಂತಲೂ ಹೆಚ್ಚು ಬಂಟ ಸಮಾಜದವರು ಇದ್ದಾರೆ. ಕಾಂತರಾಜ್ ನೇತೃತ್ವದ ಆಯೋಗವು ಅವೈಜ್ಞಾನಿಕವಾಗಿ ವರದಿಯನ್ನು ತಯಾರಿಸಿರುವುದರಿಂದ ಮತ್ತು ಅದು ಕಾಲ ಬಾಧಿತವಾಗಿರುವ ಕಾರಣ ಅದನ್ನು ಮಂಡಿಸಬಾರದು ಮತ್ತು ಮಾನ್ಯ ಮಾಡಬಾರದು ಎಂದು ಮಾನ್ಯ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಮನವಿಯನ್ನು ನೀಡಿದ್ದೆವು.

ಬಂಟ ಹಾಗೂ ನಾಡವ ಸಮಾಜದಲ್ಲಿ 40 ಶೇಕಡಾಕ್ಕಿಂತ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಇತರ ಕಾರಣಗಳಿಂದಾಗಿ ಅಂದಾಜು 20 ಲಕ್ಷ ಜನರು ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿದ್ದಾರೆ. ಅವರೆಲ್ಲರ ಬೇರು, ಮೂಲ ಹಾಗೂ ಅವಿನಾಭಾವ ಸಂಬಂಧ ನಮ್ಮ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳೊಂದಿಗಿದೆ. ನಮ್ಮ ಸಮಾಜದ ಒಟ್ಟು ಜನಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಹಾಗೂ ಕೂಲಂಕುಶ ಅಧ್ಯಯನ ಮಾಡಲು ಬಾಂಧವ್ಯ ಎಂಬ ಹೆಸರಿನಲ್ಲಿ ವಿಶ್ವದಾದ್ಯಂತ ಇರುವ ಬಂಟರ ಹಾಗೂ ನಾಡವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ವಿಷಯಗಳ ಬಗ್ಗೆ ಸಮೀಕ್ಷೆ ಮಾಡಿ ವಿಶ್ವ ಬಂಟರ ಮಾಹಿತಿ ಕೋಶವನ್ನು ತಯಾರಿಸುವ ಬಗ್ಗೆ ಮುಂದಡಿ ಇಟ್ಟಿದ್ದೇವೆ. ಬಾಂಧವ್ಯ ಎಂಬ ಈ ಮಹತ್ವಪೂರ್ಣವಾದ ಮಾಹಿತಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುಖೀ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಕಾರಣೀಕರ್ತರಾಗಬೇಕೆಂದು ಸಮಾಜ ಬಾಂಧವರೊಡನೆ ವಿನಂತಿಸಿಕೊಳ್ಳುತ್ತೇವೆ ಎಂದರು.
ಪ್ರಜ್ಞಾವಂತರದ ಸಮಾಜ ಬಾಂಧವರು ಮೀಸಲಾತಿ ಮತ್ತು ಇತರ ವಿಷಯಗಳಲ್ಲಿ ನಮಗಾದ ಕಷ್ಟ ನಷ್ಟಗಳನ್ನು ಮನವರಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆಗೆ ಬರುವವರ ಮೊಬೈಲ್ ಆಪ್ ನಲ್ಲಿರುವ ಎಂಟನೇ ಕಾಲಮ್ನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ A-0227 ರಂತೆ ಬಂಟ್ ಎಂದು ನಮೂದಿಸಿ 11ನೇ ಕಾಲಂನಲ್ಲಿರುವ ಸಮನಾರ್ಥಕದ ಪರ್ಯಾಯ ಹೆಸರು * ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ A-1026 ರಂತೆ ನಾಡವ ಎಂದು ನಮೂದಿಸುವಂತೆ ವಿನಂತಿಸುತ್ತೇವೆ. ಸಮಾಜ ಬಾಂಧವರು ಈ ರೀತಿಯಲ್ಲಿ ಸಮೀಕ್ಷೆಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವ ಮೂಲಕ ಸಮಾಜಕ್ಕೆ ನ್ಯಾಯ ಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಕಾರಣೀಭೂತರಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿದ್ದರು.