ಮೂಡುಬಿದಿರೆ: ಸೂಕ್ಷ್ಮಜೀವಿಗಳನ್ನು ಕೇವಲ ರೋಗಕಾರಕರೆಂದು ನೋಡುವ ಬದಲು, ಅವು ಪ್ರಕೃತಿಯ ಸಮತೋಲನ ಮತ್ತು ಮಾನವ ಬದುಕಿಗೆ ನೀಡುವ ಕೊಡುಗೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ಆರೋಗ್ಯಕರ ಹಾಗೂ ಸಮೃದ್ಧ ಸಮಾಜವನ್ನು ಕಟ್ಟಬಹುದು ಎಂದು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ದಿವ್ಯಶ್ರೀ ಎಂ.ಎಸ್. ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸೂಕ್ಷ್ಮಜೀವಿಗಳ ದಿನಾಚರಣೆಯ ಅಂಗವಾಗಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉಪನ್ಯಾಸದಲ್ಲಿ ಸೂಕ್ಷ್ಮಜೀವಿಗಳಿಂದ ಪಡೆಯಬಹುದಾದ ಅನೇಕ ಉಪಯೋಗಗಳ ಕುರಿತಂತೆ ವಿವರಿಸಿದರು. ಸಾಮಾನ್ಯವಾಗಿ ಸೂಕ್ಷ್ಮಜೀವಿಗಳನ್ನು ಕೇಳಿದಾಗ ಅನೇಕರು ರೋಗಗಳೊಂದಿಗೆ ಅವುಗಳನ್ನು ಸಂಬ0ಧಿಸುತ್ತಾರೆ. ನಿಜಕ್ಕೂ ಕೆಲವೆಡೆ ಸೂಕ್ಷ್ಮಜೀವಿಗಳು ಅಪಾಯಕಾರಿ, ಆದರೆ ಅದಕ್ಕಿಂತ ಹೆಚ್ಚಿನವು ಮಾನವನ ಬದುಕಿಗೆ ಅತ್ಯಗತ್ಯವಾದವುಗಳೇ ಆಗಿವೆ. ನಮ್ಮ ಕರುಳಿನಲ್ಲಿ ಕೋಟ್ಯಾಂತರ ಸೂಕ್ಷ್ಮಜೀವಿಗಳು ವಾಸಿಸುತ್ತಿದ್ದು, ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತವೆ.

ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಕರ ಜೀವನಕ್ಕೆ ನೆರವಾಗುತ್ತವೆ. ದೈನಂದಿನ ಜೀವನದಲ್ಲಿ ಹಾಲಿನ ಉತ್ಪನ್ನಗಳು – ಮೊಸರು, ಚೀಸ್, ಬೆಣ್ಣೆ ಮುಂತಾದವುಗಳ ತಯಾರಿಕೆಯಲ್ಲಿ ಸೂಕ್ಷ್ಮಜೀವಿಗಳೇ ಪ್ರಮುಖ ಪಾತ್ರವಹಿಸುತ್ತವೆ. ಕೃಷಿ ಕ್ಷೇತ್ರದಲ್ಲಿ ನೈಟ್ರೋಜನ್ ಸ್ಥಿರೀಕರಣ ಮಾಡುವ ಬ್ಯಾಕ್ಟೀರಿಯಾಗಳು ಬೆಳೆ ಉತ್ಪಾದನೆ ಹೆಚ್ಚಿಸಲು ಸಹಕರಿಸುತ್ತವೆ. ಪರಿಸರದಲ್ಲಿ ಜೀವಾವಶೇಷಗಳನ್ನು ಅಳಿಸಿ ಪ್ರಕೃತಿಯ ಚಕ್ರವನ್ನು ನಿರಂತರವಾಗಿಸುವುದು ಸಹ ಸೂಕ್ಷ್ಮಜೀವಿಗಳ ಕೆಲಸ. ಹವಾಮಾನ ಬದಲಾವಣೆ ನಿಯಂತ್ರಣ, ನವೀಕರಿಸಬಹುದಾದ ಶಕ್ತಿ ಉತ್ಪಾದನೆ, ಜೈವಿಕ ಗೊಬ್ಬರ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿಯೂ ಸೂಕ್ಷ್ಮಜೀವಿಗಳ ಕೊಡುಗೆ ಅನನ್ಯ ಎಂದರು ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಎಂ. ಹಾಗೂ ಉಪನ್ಯಾಸಕಿ ಚೈತ್ರಾ ಇದ್ದರು. ಬಿಎಸ್ಸಿ ವಿದ್ಯಾರ್ಥಿನಿ ಬೃಂದಾ ಸ್ವಾಗತಿಸಿ, ವೈಷ್ಣವಿ ಅತಿಥಿಯನ್ನು ಪರಿಚಯಿಸಿ, ಫಾತಿಮಾ ಶಿಫ್ನಾ ವಂದಿಸಿ, ವೃದ್ಧಿ ಕೇಳ ನಿರೂಪಿಸಿದರು.