ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೃಂಗಾರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಜೂನ್ 19ರಂದು ಶಿರ್ವ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಹರ್ಷವರ್ಧನ್ ಶೆಟ್ಟಿಯವರು ಸಂಜೀವಿನಿ ಒಕ್ಕೂಟದ ಸದಸ್ಯರು ನಡೆಸಬಹುದಾದ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ, ಉದ್ಯಮಶೀಲತೆಯ ಮನೋಭಾವವನ್ನು ಹೊಂದಿ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಿ, ಉತ್ತಮ ವ್ಯಾಪಾರ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿ ಒಕ್ಕೂಟ ಸದಸ್ಯೆಯರೊಂದಿಗೆ ಸಂವಾದ ನಡೆಸಿದರು.
ಶಿರ್ವ ಯೂನಿಯನ್ ಬ್ಯಾಂಕ್ ನ ಪ್ರಬಂಧಕ ರಾಘವೇಂದ್ರ, ನರೇಗಾ ಯೋಜನೆಯ ಮೇಲ್ವಿಚಾರಕ ಅಕ್ಷಯ್, ಸಂಜೀವಿನಿ ಒಕ್ಕೂಟದ ತಾಲೂಕು ಮೇಲ್ವಿಚಾರಕಿ ಪೂರ್ಣಿಮಾ ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಕಾರ್ಯದರ್ಶಿ ಚಂದ್ರಮಣಿ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳಾದ ನಿಶಾ ಮತ್ತು ಮಾನಸ ವೇದಿಕೆಯಲ್ಲಿದ್ದರು. ಶ್ವೇತಾ ವಾರ್ಷಿಕ ವರದಿ ಮತ್ತು ಜಮಾ ಖರ್ಚಿನ ವರದಿ ಮಂಡಿಸಿದರು. ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ, ಪಶು ಮತ್ತು ಆರೋಗ್ಯ ಸಖಿಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಜಯಂತಿ ಸ್ವಾಗತಿಸಿ, ಸದಸ್ಯೆ ಶಶಿಕಲಾ ವಂದಿಸಿದರು.