ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಪುಣೆಯ ಧೋಲೆ ಪಾಟೀಲ್ ರೋಡ್ ನಲ್ಲಿಯ ಮಾಣಿಕ್ ಚಂದ್ ಐಕಾನ್ ಹತ್ತಿರದ, ಆಹಾರ್ ಉಡುಪಿ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಬೆಳಿಗ್ಗೆ ಗಂಟೆ 7.00 ರಿಂದ ಅಂತರರಾಷ್ಟ್ರೀಯ ಯೋಗ ಶಿಕ್ಷಕಿ, ಸ್ವಾಸ್ಥ್ಯ ಶಿಕ್ಷಕಿ, ಯೋಗ ಗುರು ಹೀರಾ ಹೆಗ್ಡೆಯವರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿ ಗುತ್ತು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಅರ್ ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿರುತ್ತಾರೆ.

ಹೀರಾ ಹೆಗ್ಡೆ : ಅಂತರರಾಷ್ಟ್ರೀಯ ಯೋಗ ಮತ್ತು ಸ್ವಾಸ್ಥ್ಯ ಶಿಕ್ಷಕಿ ಹೀರಾ ಹೆಗ್ಡೆಯವರು ಕಣಂಜಾರು ಪಟ್ಟದ ಮನೆ ರತ್ನಾಕರ್ ಹೆಗ್ಡೆ ಮತ್ತು ಇನ್ನಾ ಬಗ್ಗರ ಗುತ್ತು ಉಷಾ ಹೆಗ್ಡೆ ಅವರ ಪುತ್ರಿ ಉಡುಪಿಯ ಚಿಟ್ಪಾಡಿಯ ರಾಜ್ಶೇಖರ್ ಶೆಟ್ಟಿಯವರ ಪತ್ನಿ. ಇವರು ಒಬ್ಬ ಸಮರ್ಪಿತ ಯೋಗ ಶಿಕ್ಷಕಿಯಾಗಿದ್ದು, ಹಲವಾರು ಕಡೆಗಳಲ್ಲಿ ಯೋಗ ಕಲಿಸುತ್ತಿದ್ದಾರೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಆನ್ಲೈನ್ ಮೂಲಕ ಕೂಡಾ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಇವರು ಪುಣೆಯ ಸಾವಿತ್ರಿ ಬಾಯ್ ಫುಲೆ ಪುಣೆ ವಿಶ್ವವಿದ್ಯಾಲಯದಿಂದ ಯೋಗ ಬೋಧನೆಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಮೈಸೂರಿನಿಂದ ಅಷ್ಟಾಂಗ ಯೋಗದಲ್ಲಿ ಸುಧಾರಿತ ತರಬೇತಿಯೊಂದಿಗೆ, ಅಕ್ಷರ್ ಯೋಗದ ಅಡಿಯಲ್ಲಿ ಪ್ರಾಣಾಯಾಮ ಮತ್ತು ಲೋನವಾಲಾದಿಂದ ಪ್ರಮಾಣೀಕೃತ ಯೋಗ ಚಿಕಿತ್ಸಕ ಪದವಿಯನ್ನು ಮತ್ತು ಪಿಜಿಡಿಸಿಎ ಅನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದಾರೆ.
ವರದಿ : ಹರೀಶ್ ಮೂಡಬಿದಿರೆ, ಪುಣೆ