ಮುಂಬಯಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಡಾ| ಆರ್.ಕೆ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಮಹಾ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ.

ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2024 ರ ಸಾಲಿನ ಬಂಟ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಇವರು ಈ ಹಿಂದೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಮುಂದೆ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದಯೆ ಇವರ ಮತ್ತು ಇವರ ಕುಟುಂಬದ ಮೇಲೆ ಸದಾ ಇರಲಿ ಎಂದು ಹಾರೈಸಿ, ಒಕ್ಕೂಟದ ಪರವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.