ಬಂಟರ ಸಮುದಾಯದವರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕಾಗಿ ಬೆಂಗಳೂರು ಬಂಟರ ಸಂಘವು ಸಮುದಾಯದ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ವಿಭಾಗದ ಛೇರ್ಮನ್ ಉಮೇಶ್ ಕುಮಾರ್ ಶೆಟ್ಟಿ ಹೇಳಿದರು. ತೀರ್ಥಹಳ್ಳಿ ತಾಲೂಕು ಬಂಟರ ಸಂಘದ ವತಿಯಿಂದ ಸೌರಮಾನ ಯುಗಾದಿಯ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.

ಬೆಂಗಳೂರು ಬಂಟರ ಸಂಘವು ಪ್ರತಿ ವರ್ಷ ಒಂದು ಕೋಟಿ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಸಮಾಜದ ಬಡ ಹೆಣ್ಣು ಮಕ್ಕಳ ಮದುವೆಗೆ 50 ಲಕ್ಷ ರೂಪಾಯಿ ಮತ್ತು ಬಡವರ ಅರೋಗ್ಯ ಚಿಕಿತ್ಸೆಗೆ 25 ಲಕ್ಷ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದ್ದೇವೆ ಎಂದು ಹೇಳಿದರು. ತೀರ್ಥಹಳ್ಳಿ ಬಂಟರ ಸಂಘದ ಉಪಾಧ್ಯಕ್ಷ ಡಿ.ಎಸ್ ವಿಶ್ವನಾಥ್ ಶೆಟ್ಟಿ ಮಾತನಾಡಿ, ನಮ್ಮ ತಾಲೂಕು ಬಂಟರ ಸಂಘವು ಇತರ ಸಮಾಜ ಬಂಧುಗಳೊಂದಿಗೆ ಸೇರಿ ಸೌಹಾರ್ದವಾಗಿ ಸಮಾಜದಲ್ಲಿ ಬೆರೆತಿದೆ. ನಮ್ಮ ಮಕ್ಕಳನ್ನು ಮಾನವ ಸಂಪತ್ತಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಎಲ್ ಪ್ರಭಾಕರ್ ಹೆಗ್ಡೆ ಮಾತನಾಡಿ, ಸಮಾಜದ ಹಿತಕ್ಕಾಗಿ ದುಡಿಯುತ್ತಿರುವ ಸಂಘದ ಚಟುವಟಿಕೆಗೆ ಪ್ರತಿಯೊಬ್ಬ ಸದಸ್ಯರ ಬೆಂಬಲ ಅಗತ್ಯವಾಗಿದೆ ಎಂದರು. ಸೌರಮಾನ ಯುಗಾದಿ ಹಬ್ಬದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ಮತ್ತು ಸಾಮೂಹಿಕ ಭೋಜನವನ್ನು ಆಯೋಜಿಸಲಾಗಿತ್ತು. ಶ್ಯಾಮಲಾ ರಾಮಣ್ಣ ಶೆಟ್ಟಿ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಬಿ.ಆರ್ ರಾಘವೇಂದ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯರಾದ ಚಂದ್ರಶೇಖರ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿ, ಕೆ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ಭಾಸ್ಕರ ಶೆಟ್ಟಿಯವರು ನಿರೂಪಿಸಿದರು.