ಹೆಬ್ರಿ ತಾಲೂಕು ಮುನಿಯಾಲಿನಲ್ಲಿ ಮೇ 3ರಂದು ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ ಮುಟ್ಲುಪಾಡಿ ಇದರ ವತಿಯಿಂದ ಮುನಿಯಾಲಿನ ವೀರ ಸಾರ್ವಕರ್ ಮೈದಾನದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಯೋಜಿಸಲಾಗಿದೆ ಎಂದು ಕ್ಲಬ್ ಗೌರವಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು ತಿಳಿಸಿದ್ದಾರೆ. ಅವರು ಮಾ. 18ರಂದು ಹೋಟೆಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಕಬಡ್ಡಿ ಪಂದ್ಯಾಟದ ವೇಳೆ ಹೃದಯಾಘಾತಕ್ಕೀಡಾಗಿ ಸಾವಿಗೀಡಾದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಮುಟ್ಲುಪಾಡಿಯ ದಿ. ಪ್ರೀತಂ ಶೆಟ್ಟಿಯವರ ಸ್ಮರಣಾರ್ಥ ಮುನಿಯಾಲಿನಲ್ಲಿ ಮೇ 3ರಂದು ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ. ರಾಜಕೀಯ ರಹಿತವಾಗಿ ನಡೆಯುವ ಈ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು, ಕ್ರಿಕೆಟ್ ತಾರೆಯರು, ಬಾಲಿವುಡ್ ನಟ- ನಟಿಯರು ಭಾಗವಹಿಸಲಿದ್ದಾರೆ ಎಂದರು.

ಬೆಳಿಗ್ಗೆ 9:30ರಿಂದ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಆಯ್ದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಇದರ ವಿಜೇತರಿಗೆ ಪ್ರಥಮ- 25000, ದ್ವಿತೀಯ- 15,000 ತೃತೀಯ- 10,000, ಹಾಗೂ ಚತುರ್ಥ -10,000 ಬಹುಮಾನ ನೀಡಲಾಗುತ್ತದೆ. ಸಂಜೆ 6.30ರಿಂದ ನಡೆಯುವ 8 ತಂಡಗಳ ಪ್ರೋ ಕಬ್ಬಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಆಡಲಿದ್ದಾರೆ. ಬಿಡ್ಡಿಂಗ್ ಮೂಲಕ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ರಾಷ್ಟ್ರಮಟ್ಟದ ಎಂಟು ಪ್ರಾಂಚೈಸಿಗಳಿಗೆ ತಂಡಗಳ ಖರೀದಿಗೆ ಅವಕಾಶವಿದೆ. ಇದರಲ್ಲಿ ಎರಡು ತಂಡಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಮೀಸಲಿರಿಸಲಾಗಿದೆ. ವಿಜೇತರಿಗೆ ಪ್ರಥಮ 1 ಲಕ್ಷ ರೂ, ದ್ವಿತೀಯ 75 ಸಾವಿರ ರೂ, ತೃತೀಯ ಮತ್ತು ಚತುರ್ಥ 50 ಸಾವಿರ ರೂ. ಹಾಗೂ ಉಳಿದ ನಾಲ್ಕು ತಂಡಗಳಿಗೆ ತಲಾ 25 ಸಾ. ರೂ. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಗದೀಶ್ ಕುಂಬ್ಳೆ ಮಾತನಾಡಿ, ಮುನಿಯಾಲಿನಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದಲ್ಲಿ ಹಿಂದೂಸ್ಥಾನದ ಉತ್ತಮ ಆಟಗಾರರು ಭಾಗಿಯಾಗಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅವಶ್ಯ ಎಂದರು. ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ.) ಮುಟ್ಲುಪಾಡಿ ಇದರ ಅಧ್ಯಕ್ಷ ಸುನಿಲ್ ಹೆಗ್ಡೆ, ಕೋಶಾಧಿಕಾರಿ ಸುದೀಪ್ ಅಜಿಲ, ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಹರೀಶ್ ಶೆಟ್ಟಿ ಪಡುಕುಡೂರು, ಗೋಪಿನಾಥ್ ಭಟ್ ಉಪಸ್ಥಿತರಿದ್ದರು.