ಮುಂಬೈ:- ಕವಿತೆ ಮನಸಂತೋಷಕ್ಕಾಗಿ ಬರೆಯಬೇಕು. ಇತರ ಯಾವುದೇ ಉದ್ದೇಶವಿಟ್ಟು ಬರೆಯಬಾರದು. ಮೊದಲು ಬೇರೆ ಬೇರೆ ಪುಸ್ತಕಗಳನ್ನು ಓದಬೇಕು. ಓದಿದ್ದನ್ನು ಇತರರೊಂದಿಗೆ ಚರ್ಚಿಸಬೇಕು. ಕವಿತೆಯ ರಚನೆಯ ಆಳವನ್ನು ಅರಿತುಕೊಳ್ಳಬೇಕು. ಇವೆಲ್ಲದರ ಜೊತೆಯಲ್ಲಿ ಕವಿತೆ ಬರೆಯುವವರು ಕಾವ್ಯ ಸಂವೇದನೆಯನ್ನು ಬೆಳೆಸಿಕೊಳ್ಳಬೇಕು. ಅದು ಇಲ್ಲದಿದ್ದರೆ ಕವಿತೆ ನಿರ್ಜೀವವಾಗುತ್ತದೆ. ಕವಿಯೊಬ್ಬ ಬರೆಯುವ ಪ್ರತಿ ಕವಿತೆಯಲ್ಲೂ ಹೊಸತನವಿರಬೇಕು. ಪ್ರಾಸ, ಲಯ, ಛಂದಸ್ಸಿನ ಅರಿವು ಇರಬೇಕು. ಕವಿತೆಗಳು ವಾಚ್ಯವಾಗಬಾರದು. ಕವಿತೆ ಸಣ್ಣದಿರಲಿ, ದೊಡ್ಡದಿರಲಿ ಅದು ಧ್ವನಿಪೂರ್ಣವಾಗಿರಬೇಕು.

ಆ ಎಚ್ಚರ ಕವಿತೆ ಬರೆಯುವ ಪ್ರತಿಯೊಬ್ಬರಿಗೂ ಇರಬೇಕು. ‘ಬೆಸ್ಟ್ ವಡ್ರ್ಸ್ ಇನ್ ಬೆಸ್ಟ್ ಆರ್ಡರ್’ ರೀತಿಯಲ್ಲಿ ಕವಿತೆ ಬರೆಯುವ ಜಾಣ್ಮೆ ತಿಳಿದಿರಬೇಕು. ಗಿಡದಲ್ಲಿ ಸೊಂಪಾಗಿ ಎಲೆ ಮೂಡಿದಂತೆ ಕವಿತೆ ಮೂಡಿಬರಬೇಕು. ಋಷಿ ಅಲ್ಲದವನು ಕವಿಯಾಗಲಾರ ಹಾಗೆಯೇ ಖುಷಿ ಇಲ್ಲದವನೂ ಕವಿಯಾಗಲಾರ’ ಎನ್ನುವ ಮಾತಿನಂತೆ ಮನಸ್ಸು ಪ್ರಪುಲ್ಲಿತವಾದಾಗ ಹೊಸತನದೊಂದಿಗೆ ಹೊಸ ರೂಪಕ, ಉಪಮೆಗಳೊಂದಿಗೆ ಕಾವ್ಯ ಕಟ್ಟುವ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಡುಂಡಿರಾಜ್ ಅವರು ಅಭಿಪ್ರಾಯ ಪಟ್ಟರು. ಅವರು ಮಾರ್ಚ್ 10ರಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಆಯೋಜಿಸಿದ್ದ ಕೃತಿ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬರವಣಿಗೆಯನ್ನು ರೂಢಿಸಿಕೊಳ್ಳುವ ಬಗೆ’ ಮಾಲಿಕೆಯಲ್ಲಿ ಕಾವ್ಯ ರಚನೆಯ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ‘ಕನ್ನಡ ಸಾಹಿತ್ಯಕ್ಕೆ ಡುಂಡಿರಾಜ್ ಕೊಡುಗೆ’ ಕೃತಿಯನ್ನು ಬಿ.ಎಸ್.ಕೆ.ಬಿ ಅಸೋಸಿಯೇಶನ್ನಿನ ಅಧ್ಯಕ್ಷರಾದ ಡಾ.ಸುರೇಶ್ ರಾವ್ ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಮುಂಬಯಿ ವಿಶ್ವವಿದ್ಯಾಲಯದ ಈ ಕನ್ನಡ ವಿಭಾಗದಲ್ಲಿ ಡಾ.ಜಿ.ಎನ್.ಉಪಾಧ್ಯ ಅವರು ಕನ್ನಡದ ಕ್ರಾಂತಿಯನ್ನು ಮಾಡಿದ್ದಾರೆ. ಇಲ್ಲಿ ಆಗಾಗ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದರಲ್ಲಿ ಪುಸ್ತಕಗಳ ರಚನೆ, ಬಿಡುಗಡೆಗೆ ಪ್ರಾಧ್ಯಾನ್ಯತೆ ಇರುತ್ತದೆ. ಈ ಕನ್ನಡದ ಕೈಂಕರ್ಯ ಮುಂದುವರಿಯಲಿ ಎಂದು ಡಾ.ಸುರೇಶ್ ರಾವ್ ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳೂರಿನ ಲೇಖಕ, ಸಾಹಿತಿ ಮುದ್ದು ಮೂಡುಬೆಳ್ಳೆ ಅವರು ಮಾತನಾಡುತ್ತಾ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಕಾರ್ಯಕಲಾಪಗಳನ್ನು ದೂರದಲ್ಲಿದ್ದು ಗಮನಿಸುತ್ತಲೇ ಬಂದಿದ್ದೇನೆ. ಇಲ್ಲಿ ಕನ್ನಡದ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಇಲ್ಲಿ ಅಧ್ಯಯನಕ್ಕೆ ಬರುವ ಸಂಶೋಧನಾರ್ಥಿಗಳು ಇತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಕನ್ನಡ ವಿಭಾಗದಲ್ಲಿ ಎಲ್ಲರನ್ನು ಒಳಗೊಳಿಸುವ ಕ್ರಿಯಾಶೀಲತೆ, ಪ್ರೀತಿ, ಸೌಜನ್ಯ, ಶಿಸ್ತು ಎಲ್ಲವೂ ಉಲ್ಲೇಖನೀಯ ಎಂದು ನುಡಿದರು. ಕೃತಿಕಾರರಾದ ಪ್ರೊ.ಜಿ.ಎನ್.ಉಪಾಧ್ಯ ಅವರು ಮಾತನಾಡುತ್ತಾ “ಮಹಾ ಕವಿಯಾಗಲು ವಾಲ್ಮೀಕಿಯಂತೆ, ಆ ಮರ ಈ ಮರ ಅನ್ನುತ್ತಾ ಕೊನೆಗೊಂದು ದಿನ ಈ ಥರ ಹ್ಯೂಮರ ಕವಿಯಾದೆ” ಎನ್ನುವ ಡುಂಡಿರಾಜರು ಕಳೆದ ನಾಲ್ಕು ದಶಕಗಳಲ್ಲಿ ಡುಂಡಿರಾಜರು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಲು ಶ್ರಮಿಸುತ್ತಾ ಬಂದಿದ್ದಾರೆ. ಡುಂಡಿರಾಜ್ ಸಾಹಿತ್ಯ ಪ್ರಿಯರಿಗೆ ಮೋಡಿ ಮಾಡಿದ ಕವಿ. ಅವರ ಕಾವ್ಯ ನಿಜಾರ್ಥದಲ್ಲಿ ಸಹೃದಯರಿಗೆ ಚೇತೋಹಾರಿಯಾದುದು. ಇಂದು ಅವರ ಸಮಕ್ಷಮದಲ್ಲಿ ಈ ಕೃತಿ ಬಿಡುಗಡೆಗೊಂಡಿರುವುದು ಸಂತೋಷವನ್ನು ನೀಡಿದೆ ಎಂದು ನುಡಿದರು. ಕೃತಿಯ ಕುರಿತು ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮವನ್ನು ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಎಸ್.ಕೆ.ಬಿ ಅಸೋಸಿಯೇಷನ್ನಿನ ಕಾರ್ಯದರ್ಶಿ ಶ್ರೀಕಾಂತ ಸವಣೂರು, ಸದಸ್ಯರಾದ ಪ್ರೇಮಾ ರಾವ್, ಶೈಲಿನಿ ರಾವ್, ಸಹನಾ ಪೋತಿ, ಕನ್ನಡ ಕಲಾಕೇಂದ್ರದ ಮಧುಸೂದನ ಟಿ.ಆರ್, ಸಂಘಟಕ ಎಸ್.ಕೆ ಸುಂದರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕವಿಯಾದವನು ಕಾವ್ಯ ಸಂವೇದನೆ ಬೆಳೆಸಿಕೊಳ್ಳಬೇಕು-
ಡುಂಡಿರಾಜ್