ಆಹ್ವಾನ ಪತ್ರ (ಇನ್ವಿಟೇಶನ್ ಕಾರ್ಡ್) ಮದುವೆಗೆಂದು ಆಹ್ವಾನಿಸಲು ನೀಡುವ ಪತ್ರಕ್ಕೆಂದೇ ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಕೊಡುವ ಕಾರ್ಡ್ ಗಳನ್ನು ಬಹುತೇಕರು ತೆರೆದು ಕೂಡಾ ನೋಡುವುದಿಲ್ಲ. ಇಲ್ಲಿಂದ ಶುರುವಾಗುವ ಈ ದುಂದು ವೆಚ್ಚ ಹೇಗಿರುತ್ತದೆ ನೀವೇ ನೋಡಿ. ಸಾವಿರಾರು ಜನರನ್ನು ಮದುವೆಗೆ ಕರೆಯುವುದು (ಕರೆದವರಿಗೆ ಯಾರು ಬಂದಿದ್ದಾರೆ ಎಂದು ಗಮನಿಸಲೂ ಸಮಯವಿಲ್ಲ. ಹಾಜರಾದವರಿಗೆ 6 ತಿಂಗಳ ನಂತರ ಯಾವ/ಯಾರ ಮದುವೆಗೆ ಹೋಗಿರುವುದು ಸಹ ನೆನಪಿರುವುದಿಲ್ಲ)

ನಿಶ್ಚಿತಾರ್ಥದ ಹೆಸರಿನಲ್ಲಿ ವಿವಾಹವಾಗುವ ಮೊದಲೇ ಭವಿಷ್ಯದ ವಧು ವರರನ್ನು ಅಕ್ಕ ಪಕ್ಕ ಕೂರಿಸಿ ಇನ್ನಿಲ್ಲದ ಆರ್ಭಾಟ ಮಾಡುವುದು, ಮದುವೆಯ ಮೊದಲು ನಡೆಸುವ ಪ್ರೀ ವೆಡ್ ಫೋಟೋ ಶೂಟ್ ಒಂದು ಚಲನಚಿತ್ರ ಮಟ್ಟದಲ್ಲಿದ್ದು, ವಧು ಮತ್ತು ವರರು ವಿಚಿತ್ರ ಮತ್ತು ಪ್ರಜ್ಞಾಹೀನ ಭಂಗಿಗಳಲ್ಲಿ ಫೋಟೋಗಳಿಗೆ ಪೋಸ್ ನೀಡುತ್ತಾರೆ. ಅಲ್ಲದೆ, ಆ ಫೋಟೋಗಳನ್ನು (ಕೆಲವು ನಿಕಟವಾದವುಗಳು) ಮದುವೆ ಸಮಾರಂಭದಲ್ಲಿ ದೊಡ್ಡ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮದುವೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ ಹೂವಿನ ಅಲಂಕಾರ, ಬಗೆ ಬಗೆಯ ಸೆಟ್ಟಿಂಗ್ ಗರಿಷ್ಟ 10 ಗಂಟೆಗಳಲ್ಲಿ ಪೋಲು, ಮದುವೆ ಸೀಸನ್ ಇದ್ದರಂತೂ ಇನ್ನೂ ಅವಸರದಲ್ಲಿ ಜಾಗ ಖಾಲಿ ಮಾಡಬೇಕು.
ಸಹಜ ಸೌಂದರ್ಯವನ್ನು ಬಚ್ಚಿಟ್ಟು ಕೃತಕ ಸೌಂದರ್ಯಕ್ಕಾಗಿಯೆ ಬ್ಯೂಟಿಷಿಯನ್ , ಮೇಕ್ಅಪ್ ಗಾಗಿಯೇ ಲಕ್ಷ ಲಕ್ಷಗಳಷ್ಟು ಖರ್ಚು ಮಾಡುವುದು, ಫೋಟೊಗಳು ಕೇವಲ ಫೋಟೋಗ್ರಾಫರ್ ಗಾಗಿಯೇ ಮದುವೆಯಾದಂತಿರುತ್ತದೆ. ಅವರು ಹೇಳಿದ ವಿಚಿತ್ರ ಭಂಗಿಗಳಲ್ಲಿ ಪೋಸ್ ಕೊಟ್ಟು ಅವುಗಳು (ಫೋಟೋಗಳು) ಕೊನೆಯಲ್ಲಿ ನಿರುಪಯುಕ್ತವೇ. (ಫೋಟೋಗ್ರಾಫರ್ ಬಿಲ್ ಕೂಡ ಲಕ್ಷ ಗಟ್ಟಲೆ) ಮದುವೆಯ ಬಟ್ಟೆಗೂ ಲಕ್ಷಗಟ್ಟಲೆ ಖರ್ಚು ಮಾಡಿ ಜೀವನದಲ್ಲಿ ಮತ್ತೆಂದು ಅವುಗಳನ್ನು ಬಳಸದೆ ಅವು ಬೀರುವಿಗೇ ಭಾರವಾಗುತ್ತವಸ್ಟೆ!!
ಇನ್ನು ಊಟದ ವಿಷಯಕ್ಕೆ ಬಂದರೆ
ಬೆಳಗಿನ ಉಪಾಹಾರಕ್ಕೆ ಎರಡು ಮೂರು ಬಗೆಯ ಸ್ವೀಟ್ಸ್, ಐದಾರು ಬಗೆಯ ತಿಂಡಿಗಳು ಮೂರ್ನಾಲ್ಕು ಗಂಟೆಗಳ ಅಂತರದಲ್ಲಿ ಮಧ್ಯಾಹ್ನದ ಊಟಕ್ಕೆ ಮತ್ತೆ ಐದಾರು ಸ್ವೀಟ್ಸ್ ನಾಲ್ಕೈದು ಬಗೆಯ ಪಲ್ಯ ಕೋಸಂಬರಿ, ಹಲವಾರು ಬಗೆಯ ರೈಸ್, ಹಣ್ಣುಗಳು ಹೀಗೆ ಸಾಗುತ್ತಾ ಹೋಗುತ್ತದೆ ಪಟ್ಟಿ. ಇನ್ನೂ ಎಂದೂ ಊಟ ಕಂಡಿಲ್ಲವೆಂಬಂತೆ ಒಬ್ಬರ ಮೇಲೊಬ್ಬರು ಬಿದ್ದು ತಿನ್ನಲು ಒದ್ದಾಡುವ ಆ ಬಫಿಟ್ಗಳು, ಅಬ್ಬಾ ಇನ್ನೇನು ಊಟ ಮುಗಿಯಿತೆಂದು ನಿರಾಳವಾಗುವಂತಿಲ್ಲ, ಒಂದು ಕಿಲೋಮೀಟರ್ ಸರದಿಯಲ್ಲಿ ನಿಂತು, ವೇದಿಕೆಯನ್ನು ಹತ್ತಿ, ವಧು ವರರನ್ನು ಹರಸಿ ಕೃತಕ ನಗೆ ಬೀರಿ, ಫೋಟೋಗಳಿಗೆ ಪೋಸ್ ನೀಡುವುದು (ಆ ಫೋಟೋಗಳನ್ನು ನಾವೆಂದೂ ನೋಡಲಾರೆವು). ವೇದಿಕೆಯ ಮೇಲೆ ವಧು ವರರನ್ನು ಹರಸಲು ಹೋಗುವಾಗ ಶೂ, ಚಪ್ಪಲಿಗಳನ್ನು ಕೆಳಗೆ ತೆಗೆದಿಟ್ಟು ಹೋಗಬೇಕು. ಆದರೆ ಹೆಚ್ಚಿನ ಕಡೆಗಳಲ್ಲಿ ಇದನ್ನು ಕಡೆಗಣಿಸುತ್ತಾರೆ. ಇನ್ನೂ ಉಡುಗೊರೆಗಳ ಹೆಸರಿನಲ್ಲಿ ಬರುವ ಅನುಪಯುಕ್ತ ವಸ್ತುಗಳನ್ನು ಏನು ಮಾಡಬೇಕೆಂದು ಬಹುಶಃ ಯಾರಿಗೂ ತಿಳಿದಿರಲಿಕ್ಕಿಲ್ಲ,
ಡಿಜೆ ,ಮ್ಯೂಸಿಕ್, ಒರ್ಕೆಸ್ಟ್ರಾ ಹೀಗೆ, ಕಿವಿ ಮತ್ತು ಮೆದುಳು ಸಹಿಸದ ಅತ್ಯಂತ ಭಯಾನಕ ಶಬ್ದದ ವಾತಾವರಣ (ಇದಕ್ಕೂ ಲಕ್ಷಗಳಲ್ಲಿ ಸುರಿಯಬೇಕೆಂದು ಬೇರೆ ಹೇಳಬೇಕಾಗಿಲ್ಲ) ಮೆಹೆಂದಿ, ಸಂಗೀತ, ಬ್ಯಾಚುಲರ್ ಪಾರ್ಟಿ, ಈ ತಂತುಗಳು ಬೇರೆ!!
ದುಡ್ಡಿರುವವರು, ಆಗರ್ಭ ಶ್ರೀಮಂತರು ಇವೆಲ್ಲವನ್ನೂ ನಿಭಾಯಿಸುವರು. ಆದರೆ ಒಬ್ಬರನ್ನು ನೋಡಿ ಇನ್ನೊಬ್ಬರೆನ್ನುವಂತೆ ಮಧ್ಯ ಕೆಳ ಮಧ್ಯಮ ವರ್ಗದವರೂ ಸಹ ಇವೆಲ್ಲವನ್ನೂ ಮಾಡಲು ಹೋಗಿ ಸಾಲ ಸೋಲಗಳಲ್ಲಿ ಮುಳುಗುತ್ತಿರುವುದು ಅತ್ಯಂತ ಶೋಚನೀಯ. ಈ ತಪ್ಪು ಕಲ್ಪನೆಯ ನೀತಿಗಳು ಒಂದಕ್ಕೊಂದು ಅನುಸರಿಸುತ್ತವೆ (ಚೈನ್ ಲಿಂಕ್ ) ಮತ್ತು ಇದರಿಂದ ಫಂಕ್ಷನ್ ಹಾಲ್ಗಳು, ಕ್ಯಾಟರರ್ಗಳು, ಫೋಟೋಗ್ರಾಫರ್ಗಳು, ಡೆಕೋರೇಟರ್ಗಳು ಹೀಗೆ ಹಲವರು ಪೂರ್ಣ ಲಾಭ ಪಡೆಯುತ್ತಿರುವುದರಲ್ಲಿ ಸಂಶಯವಿಲ್ಲ.





































































































