ಹೋಟೆಲ್ ಉದ್ಯಮದಲ್ಲಿ ಅಪಾರ ಅನುಭವ ಹೊಂದಿದ ಪ್ರವೀಣ್ ಶೆಟ್ಟಿ ತಮ್ಮ ಅನುಭವವನ್ನು ಧಾರೆಯೆರೆದು ವಿಶ್ವ ದರ್ಜೆಯ ರೆಸಾರ್ಟ್ ನಿರ್ಮಿಸಿದ್ದಾರೆ. ಇದು ಹುಟ್ಟೂರಿಗೆ ಅವರು ನೀಡಿದ ಬಹುದೊಡ್ಡ ಕೊಡುಗೆ. ಅಚ್ಚುಕಟ್ಟುತನದಿಂದ ನಿರ್ಮಿಸಿದ ಈ ರೆಸಾರ್ಟ್ ಗೆ ಉತ್ತಮ ಭವಿಷ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ಹೇಳಿದರು. ಪುಣೆಯ ಅತಿಥಿ ಗ್ರೂಪ್ ಆಫ್ ರೆಸ್ಟೋರೆಂಟ್ಸ್ ನ ಸಹ ಸಂಸ್ಥೆಯಾಗಿ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಿರ್ಮಿಸಲಾದ ಸಂಪಿಗೆ ರೆಸಾರ್ಟ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಮೂಡಬಿದಿರೆಗೆ ಭೇಟಿ ನೀಡುವವರಿಗೆ ಸ್ಟಾರ್ ಹೋಟೆಲ್ ಸೌಲಭ್ಯ ಸಿಗಲಿದೆ. ಇದು ಮೂಡಬಿದಿರೆ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು ಇಲ್ಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಸಂಪಿಗೆ ರೆಸಾರ್ಟ್ ನ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಮಾತನಾಡಿ, ಹುಟ್ಟೂರಿನಲ್ಲಿ ಸುಸಜ್ಜಿತ ರೆಸಾರ್ಟ್ ನಿರ್ಮಿಸಬೇಕೆಂಬ ಬಹುಕಾಲದ ಕನಸು ನನಸಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ| ಸುಧಾಕರ ಶೆಟ್ಟಿ ಪುಣೆ, ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಕೆ ಅಭಯಚಂದ್ರ ಜೈನ್, ಕೆಪಿಸಿಸಿ ಸದಸ್ಯ ಮಿಥುನ್ ರೈ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಕೆ ಶ್ರೀಪತಿ ಭಟ್, ಶ್ರೀಧರ ಆಚಾರ್ಯ, ನಾರಾಯಣ ಪಿಎಂ, ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಪುರುಷೋತ್ತಮ ಶೆಟ್ಟಿ, ರವೀಂದ್ರ ಎಸ್ ಶೆಟ್ಟಿ, ಗಜಾನನ ಎಸ್ ಪೂಂಜಾ, ಪುರುಷೋತ್ತಮ ಶೆಟ್ಟಿ ಉಡುಪಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು.