ಪುತ್ತೂರು ತಾಲೂಕು ಯುವ ಬಂಟರ ಸಂಘದ ಅರ್ಧ ವಾರ್ಷಿಕ ಸಭೆಯು ನವೆಂಬರ್ 19 ರಂದು ಪುತ್ತೂರು ಎಂ. ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಯುವ ಬಂಟರ ಸಂಘ ಉತ್ತಮವಾದ ಕಾರ್ಯಕ್ರಮದ ಮೂಲಕ ಯುವ ಬಂಟರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿದೆ. ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವುರವರ ಸಮರ್ಥ ನಾಯಕತ್ವದಲ್ಲಿ ಯುವ ಬಂಟರ ಸಂಘವು ಅತ್ಯುತ್ತಮ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ ಅವರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಜೀವನ್ ಭಂಡಾರಿ ಸ್ಮರಣಾರ್ಥಕ ನಡೆಯುವ ಕ್ರೀಡಾಕೂಟವು ಇನ್ನೂ ಉತ್ತಮವಾಗಿ ನಡೆದು ಜನಪ್ರಿಯವಾಗುವಂತೆ ಎಲ್ಲರೂ ಕೆಲಸ ಮಾಡಬೇಕೆಂದು ಹೇಳಿದರು.
ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವುರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅರ್ಧ ವಾರ್ಷಿಕ ಅವಧಿಯಲ್ಲಿ ಉತ್ತಮವಾದ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಬರುವ ಡಿಸೆಂಬರ್ ತಿಂಗಳ 15ರಂದು ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಅವರು 2025 ನೇ ಫೆಬ್ರವರಿ 22 ಮತ್ತು 23ರಂದು ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಯುವ ಬಂಟರ ಸಂಘದ ಕ್ರಿಕೆಟ್ ಪಂದ್ಯಾಟ ನಡೆಸುವುದೆಂದು ತೀರ್ಮಾನಿಸಲಾಗಿದೆ. ಕಾರ್ಯಕ್ರಮವನ್ನು ನಿರ್ವಹಿಸಲು ಕಾರ್ತಿಕ್ ರೈಯವರ ತಂಡಕ್ಕೆ ಜವಾಬ್ಧಾರಿಯನ್ನು ನೀಡಲಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲಾ ಬಂಟ ಬಾಂಧವರು, ತಂಡದ ಮಾಲಕರು, ವ್ಯವಸ್ಥಾಪಕರು, ಕ್ರಿಕೆಟ್ ಆಟಗಾರರು, ಸರ್ವ ಸದಸ್ಯರು ಸಹಕರಿಸಬೇಕೆಂದು ಕೇಳಿಕೊಂಡರು.
ವೇದಿಕೆಯಲ್ಲಿ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ತಾಲೂಕು ಬಂಟರ ಸಂಘದ ಮಾಜಿ ಕಾರ್ಯದರ್ಶಿಗಳಾದ ಮೋಹನ್ ರೈ ನರಿಮೊಗರು, ರಾಕೇಶ್ ರೈ ಕೆಡಿಂಜಿ, ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ (ಆಡಳಿತ ವಿಭಾಗ) ರಂಜಿನಿ ಶೆಟ್ಟಿ ಉಪಸ್ಥಿತರಿದ್ದರು. ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ವಿಭಾಗ) ಪ್ರಜ್ವಲ ರೈ ಸೊರಕೆ ವರದಿ ವಾಚಿಸಿದರು. ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿ ಕೋಶಾಧಿಕಾರಿ ಶಿವಶ್ರೀ ರಂಜನ್ ರೈ ವಂದಿಸಿದರು. ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ರವಿ ಪ್ರಸಾದ್ ಶೆಟ್ಟಿ ಬನ್ನೂರು, ಯುವ ಬಂಟರ ಸಂಘದ ನಾಮ ನಿರ್ದೇಶಿತ ಸದಸ್ಯ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸಾಂಸ್ಕೃತಿಕ ಸಂಚಾಲಕ ಭಾಗ್ಯೇಶ್ ರೈ, ಕಾರ್ತಿಕ್ ರೈ, ಪ್ರಜ್ವಲ್ ರೈ ತೊಟ್ಲ, ಶುಭ ರೈ, ವಿಜಯಲಕ್ಷ್ಮಿ ರೈ, ಮಾಧವಿ ಮನೋಹರ್ ರೈ, ಧಾರ್ಮಿಕ ಸಂಚಾಲಕ ಮನ್ಮಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.