ವಿದ್ಯಾಗಿರಿ: ದೌರ್ಜನ್ಯ ಕುರಿತು ಕೇವಲ ನೊಂದ ಮಹಿಳೆ ಮಾತ್ರವಲ್ಲ, ಅವರ ಪರವಾಗಿ ಯಾರು ಬೇಕಾದರೂ ದೂರು ನೀಡಬಹುದು. ಮಹಿಳೆ ಮೇಲೆ ಮಹಿಳೆಯೇ ದೌರ್ಜನ್ಯ ಎಸಗಿದರೂ ಅಪರಾಧ ಎಂದು ಹೊಳ್ಳ ಆ್ಯಂಡ್ ಹೊಳ್ಳ ಅಸೋಸಿಯೇಟ್ಸ್ನ ಮೇಘನಾ ಆರ್. ಬಲ್ಲಾಳ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜು ಆಂತರಿಕ ಗುಣಮಟ್ಟ ಮೌಲ್ಯಮಾಪನ ಘಟಕ (ಐಕ್ಯೂಎಸಿ), ಲೈಂಗಿಕ ದೌರ್ಜನ್ಯ ತಡೆ ಘಟಕ, ಸಮಾಜಕಾರ್ಯ ವಿಭಾಗವು ಬೋಧನಾಂಗ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ‘ ಸಂಸ್ಥೆಯ ಆವರಣದಲ್ಲಿ ಜವಾಬ್ದಾರಿಯುತ ಸಂಸ್ಕೃತಿಯ ನಿರ್ಮಾಣ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮೂಡುಬಿದಿರೆ ಮನೆತನದ ಅಬ್ಬಕ್ಕ ನಮ್ಮ ಹೆಮ್ಮೆ. ಆಕೆಯ ಸಾಧನೆ ಎಲ್ಲರಿಗೂ ಮಾದರಿಯಾಗಬೇಕು ಎಂದರು. ದೇಶದಲ್ಲಿ 1990 ಬಳಿಕ ಮಹಿಳೆಯರು ಕೆಲಸಕ್ಕೆ ಬರುವ ಸಂಖ್ಯೆ ಹೆಚ್ಚಾಯಿತು. ರಾಜಸ್ಥಾನದ ಭವಾರಿ ದೇವಿ ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ವಿಶಾಖ ಸಂಸ್ಥೆಯ ಹೋರಾಟದ ಫಲವಾಗಿ ಕಾಯಿದೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.


ಹೀಗಾಗಿ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆ, ಮುಂಜಾಗ್ರತೆ ಹಾಗೂ ಪುನರ್ವಸತಿ) ಕಾಯಿದೆ -2013′ ಜಾರಿಗೆ ಬಂತು ಎಂದರು. ಈ ಕಾಯಿದೆ ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ. ಪುರುಷರು ಮಾತ್ರವಲ್ಲ, ಯಾರೇ ದೌರ್ಜನ್ಯ ನಡೆಸಿದರೂ ಶಿಕ್ಷೆಗೆ ಒಳಗಾಗುತ್ತಾರೆ. ದೌರ್ಜನ್ಯ ತಿಳಿದರೆ ತಕ್ಷಣವೇ ದೂರು ನೀಡಿ ಎಂದರು. ಭೌತಿಕ ಸಂಪರ್ಕ ಮಾತ್ರವಲ್ಲ ಮಾನಸಿಕವಾಗಿ ಎಸಗುವ ಲೈಂಗಿಕ ದೌರ್ಜನ್ಯವೂ ಶಿಕ್ಷೆಗೆ ಅರ್ಹ ಎಂದರು. ಸಹೋದ್ಯೋಗಿಗಳ ಕುರಿತು ಗಾಸಿಪ್ ಮಾಡುವುದೂ ದೌರ್ಜನ್ಯ. ಭಾವನಾತ್ಮಕ ಮತ್ತು ಮಾನಸಿಕ ನೋವು ನೀಡುವುದೂ ದೌರ್ಜನ್ಯ. ಭೌತಿಕ, ನೋಟ, ಮಾತು, ಆನ್ ಲೈನ್ ಸಂದೇಶ- ಕರೆ ಇತ್ಯಾದಿಗಳೂ ದೌರ್ಜನ್ಯದ ಭಾಗ ಎಂದರು. ಪ್ರತಿ ಸಂಸ್ಥೆಯಲ್ಲಿ ಮಹಿಳಾ ದೌರ್ಜನ್ಯ ತಡೆ ಘಟಕ ಕಡ್ಡಾಯವಾಗಿ ಇರಬೇಕು. ಸಾರ್ವಜನಿಕವಾಗಿಯೂ ಘಟಕಗಳಿವೆ. ಈ ಬಗ್ಗೆ ಕಾರ್ಮಿಕ ನ್ಯಾಯಾಲಯದಲ್ಲೂ ದೂರು ದಾಖಲಿಸಬಹುದು ಎಂದರು. ದೌರ್ಜನ್ಯ ಪ್ರಕರಣದಲ್ಲಿ ಸಂಧಾನ ಒಳ್ಳೆಯದಲ್ಲ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕಾಯಿದೆ ಪ್ರಕಾರ ವಿದ್ಯಾರ್ಥಿನಿಯರೂ ದೂರು ನೀಡಬಹುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟ್ ವಿವೇಕ್ ಆಳ್ವ ಮಾತನಾಡಿ, ಮಹಿಳೆಯರ ಭೌತಿಕ ಸುರಕ್ಷತೆಯಷ್ಟೇ ಮಾನಸಿಕ ಸುರಕ್ಷತೆಯು ಮುಖ್ಯ. ಭಾರತವು ಸೇರಿದಂತೆ ಪ್ರಪಂಚದ ವಿವಿಧ ದೇಶಗಳಲ್ಲಿ ಮಹಿಳೆ, ಪುರುಷರಿಗೆ ಸಮನಾಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಸಹಜವಾಗಿ ಆ ದೇಶಗಳ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ)ದ ವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ. ಯಾವ ದೇಶ ಮಹಿಳೆಯರನ್ನು ನಿರ್ಲಕ್ಷಿಸುತ್ತಿದೆಯೋ ಅಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂದರು. ಸಮಾಜದಲ್ಲಿ ಉಸಿರುಗಟ್ಟುವಿಕೆ ವಾತಾವರಣ ದೂರವಾಗಬೇಕು. ಸಮಸ್ಯೆಗಳ ಬಗ್ಗೆ ಮಾತನಾಡಿ, ಜಾಗೃತರಾಗಿ, ಸಮಾಜವನ್ನು ಎಚ್ಚರಿಸಿ. ಮಹಿಳೆಯರಿಗೆ ಗೌರವ ನೀಡುವ ಮೌಲ್ಯಯುತ ಸಂಸ್ಕೃತಿಯ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ತಾಯಿಯ ಅಸುರಕ್ಷಿತ ಭಯವು ಒಂದು ಸಮುದಾಯವನ್ನೇ ಹಲವು ಶತಮಾನಗಳ ಹಿಂದೆ ಕೊಂಡೊಯ್ಯಬಹುದು ಎಂದರು. ಮಹಿಳೆ ರಾತ್ರಿ ಅಡ್ಡಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಪುರುಷರು ಯೋಚಿಸಬೇಕಾಗಿದೆ ಎಂದರು. ಸುರಕ್ಷತೆಯ ಪಟ್ಟಿಯಲ್ಲಿ ಭಾರತವು 190 ರಾಷ್ಟ್ರಗಳ ಪೈಕಿ 134ನೇ ಸ್ಥಾನದಲ್ಲಿದೆ. ಮಹಿಳೆಯ ಸುರಕ್ಷತೆ ನಿಟ್ಟಿನಲ್ಲಿ ಪುರುಷರು ಜವಾಬ್ದಾರಿ ವಹಿಸಬೇಕು ಎಂದರು. ಘಟಕ ಸಂಯೋಜಕಿ ಡಾ ಸ್ವಪ್ನಾ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ಇಂಶಾ ವಂದಿಸಿದರು.





































































































