ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕುಂದಾಪುರ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಯಡಾಡಿ ಮತ್ಯಾಡಿ ಇವರ ಸಹಭಾಗಿತ್ವದಲ್ಲಿ ವಿದ್ಯಾರಣ್ಯ ಶಾಲೆಯ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಕುಂದಾಪುರ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ನಡೆಯಿತು. ಶಿಕ್ಷಣ ಇಲಾಖೆ ಕುಂದಾಪುರ ವೃತ್ತದ ಇಸಿಓ ಶೇಖರ ಪಡುಕೋಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಣ್ಯ ಅಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ ಮಾತನಾಡುತ್ತಾ “ಮಕ್ಕಳ ಸೃಜನಶೀಲ ಚಿಂತನೆಗೆ ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗುತ್ತವೆ ಮತ್ತು ಮಕ್ಕಳ ಪಠ್ಯದ ವಿಷಯವನ್ನು ಅತ್ಯಂತ ಸರಳವಾಗಿ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ನಮ್ಮ ಸಂಸ್ಥೆ ಸದಾ ಸಹಕಾರ ನೀಡಲಿದೆ” ಎಂದರು.
ಕಾರ್ಯಕ್ರಮದಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ, ಶಿಕ್ಷಣ ಇಲಾಖೆ ಹಾಲಾಡಿ ವೃತ್ತದ ಇಸಿಓ ಶೇಖರ್ ಯು., ಶಿಕ್ಷಣ ಇಲಾಖೆ ಕುಂದಾಪುರದ ಬಿ.ಆರ್.ಪಿ ಗಳಾಗಿರುವ ಮಿಲ್ಟನ್ ಕ್ರಾಸ್ತಾ, ಸಂತೋಷ, ಶ್ರೀಮತಿ ಸುಕನ್ಯಾ ಹಾಗೂ ಹುಣ್ಸೆಮಕ್ಕಿ ಕ್ಲಸ್ಟರ್ ನ ಸಿ.ಆರ್.ಪಿ ವಸಂತ್ ಉಪಸ್ಥಿತರಿದ್ದರು. ವಸ್ತು ಪ್ರದರ್ಶನ ಸ್ಪರ್ಧೆಯು ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ನಡೆದಿದ್ದು ಒಟ್ಟು 120 ಮಕ್ಕಳು ಭಾಗವಹಿಸಿದ್ದರು. ಮಕ್ಕಳು ತಮ್ಮ ಸೃಜನಶೀಲ ಚಿಂತನೆಯಿಂದ ರಚಿಸಿದ್ದ ಹಲವಾರು ವಿಜ್ಞಾನ ಮಾದರಿಗಳು ವಿಶೇಷವಾಗಿ ಗಮನ ಸೆಳೆಯಿತು. ಶಿಕ್ಷಣ ಇಲಾಖೆಯ ಕೋಟೇಶ್ವರ ವೃತ್ತದ ಇ.ಸಿ.ಓ ಹಾಗೂ ವಿಜ್ಞಾನ ವಸ್ತು ಪ್ರದರ್ಶನದ ನೋಡೆಲ್ ಅಧಿಕಾರಿಗಳಾದ ರಾಜ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಸ್ವಾಗತಿಸಿ, ಶಿಕ್ಷಕಿ ಪ್ರೇಮ ನಿರೂಪಿಸಿದರು.