ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ನವಿ ಮುಂಬಯಿ ಪರಿಸರದಲ್ಲಿ ಬಂಟರ ಒಗ್ಗಟ್ಟಿನ ಶಕ್ತಿ ಕೇಂದ್ರವಾಗಿರುವ ಬಂಟ್ಸ್ ಸೆಂಟರ್ ನಲ್ಲಿ ನವೀಕೃತಗೊಂಡಿರುವ ನಮ್ಮ ಹೆಸರಿನ ಸಭಾಭವನ ಈ ಪರಿಸರದ ಎಲ್ಲಾ ಜನರಿಗೂ ಅನುಕೂಲವಾಗುವ ಭವನವಾಗಲಿ. ಅಸೋಸಿಯೇಷನ್ ನ ಅಧ್ಯಕ್ಷರಾದ ಸಿಎ ಸುರೇಂದ್ರ ಶೆಟ್ಟಿ ಮತ್ತು ಅವರ ತಂಡವು ಈ ಭವ್ಯ ಕಟ್ಟಡದ ತಳಮಹಡಿಯಲ್ಲಿರುವ ತನ್ನ ಹೆಸರಿನ ಭವನವನ್ನು ಹವಾ ನಿಯಂತ್ರಿತ ಭವನವನ್ನಾಗಿ ಪರಿವರ್ತಿಸಿದೆ. ಉತ್ತಮವಾದ ಕಾರ್ಯವನ್ನು ಹಮ್ಮಿಕೊಂಡಿದೆ. ಭವ್ಯ ಬಂಟ್ಸ್ ಸೆಂಟರ್ ಉತ್ತಮವಾದ ನಿವೇಶನವನ್ನು ಹೊಂದಿದ್ದು, ರಾತ್ರಿ ಶಾಲೆ ಹಾಗೂ ಹಗಲು ಶಾಲೆಯನ್ನು ನಡೆಸುತ್ತಿರುವುದು ಅಭಿಮಾನದ ವಿಷಯವಾಗಿದೆ. ಸಂಘಟನೆಯನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಇಂಥಹ ಉತ್ತಮ ಕಾರ್ಯಕ್ಕೆ ಸಮಾಜ ಬಾಂಧವರ ಸಹಕಾರವು ಯಾವತ್ತೂ ಇದೆ. ಆದುದರಿಂದ ಈ ಸಂಘಟನೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ತರುವ ಪ್ರಯತ್ನವನ್ನು ನಾವೆಲ್ಲಾ ಸೇರಿ ಮಾಡೋಣ ಎಂದು ಬಾಂಬೇ ಬಂಟ್ಸ್ ಅಸೋಸಿಯೇಷನ್ ಟ್ರಸ್ಟಿ ರಿಜೆನ್ಸಿ ಗ್ರೂಪ್ ಆಫ್ ಹೋಟೆಲ್ ನ ಆಡಳಿತ ನಿರ್ದೇಶಕ ಬಂಟ್ಸ್ ಸೆಂಟರ್ ನ ತಳಮಹಡಿಯ ದಾನಿ ಜಯರಾಮ್ ಶೆಟ್ಟಿ ನುಡಿದರು.
ಅವರು ಅಕ್ಟೋಬರ್ 19ರಂದು ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ನವಿ ಮುಂಬಯಿ ಜೂಯಿನಗರದಲ್ಲಿರುವ ಬಂಟ್ಸ್ ಸೆಂಟರ್ ನ ತಳಮಹಡಿಯಲ್ಲಿರುವ ಲತಾ ಜಯರಾಮ್ ಶೆಟ್ಟಿ ಸಭಾಗೃಹ ನವೀಕೃತಗೊಂಡು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ಬಳಿಕ ಮಾತನಾಡಿ, ಈ ಭವ್ಯ ಸಂಕೀರ್ಣ ಇನ್ನಷ್ಟು ಶೋಭೆ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯ ಕಾರ್ಯಗಳು ಈ ಸಂಸ್ಥೆಯಿಂದ ನಡೆಯಲಿ. ಬಂಟ ಸಮಾಜದ ಶ್ರೇಯೋಭಿವೃದ್ಧಿಯ ಕಾರ್ಯಗಳು ಇನ್ನಷ್ಟು ನಡೆಯಲಿ. ಎಲ್ಲಾ ಕಾರ್ಯಕ್ರಮಗಳಿಗೆ ನನ್ನ ಸದಾ ಸಹಕಾರವಿದೆ ಎಂದು ನುಡಿದರು.
ನವೀಕೃತಗೊಂಡ ಲತಾ ಜಯರಾಮ ಶೆಟ್ಟಿ ಸಭಾಗೃಹವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಭಾಗೃಹದ ದಾನಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ್ ಶೆಟ್ಟಿ ಮಾತನಾಡಿ, ಅಸೋಸಿಯೇಷನ್ ನ ಸೇವಾ ಕಾರ್ಯಗಳು ಬಹಳ ಶಿಸ್ತು ಬದ್ಧವಾಗಿ ನಡೆಯುತ್ತಿದೆ. ಬಂಟ ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಮುನ್ನಡೆಸಬೇಕು. ನವೀಕೃತಗೊಂಡ ಈ ಸಭಾಂಗಣ ಸುಂದರವಾಗಿ ರೂಪುಗೊಂಡಿದೆ. ಜನಸಾಮಾನ್ಯರಿಗೆ ಈ ಮೂಲಕ ಇನ್ನಷ್ಟು ಸೇವೆಗಳು ಇಲ್ಲಿಂದ ನೀಡುವಂತಾಗಲಿ. ಈ ಸಂಸ್ಥೆಯಲ್ಲಿ ಬಹಳಷ್ಟು ನ್ಯಾಯವಾದಿಗಳು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಕೈಗಳಲ್ಲಿ ಭಗವದ್ಗೀತೆಗಳು ಇದೆ. ಅದು ಈ ಕಾಲಘಟ್ಟದಲ್ಲಿ ಅಗತ್ಯವಿದೆ. ಪ್ರತಿ ಮನೆಯಲ್ಲೂ ಭಗವದ್ಗೀತೆಯ ಪಠಣಗಳು ಆಗಬೇಕು. ಭಗವದ್ಗೀತೆಯಲ್ಲಿ ಧರ್ಮದ ಸಂದೇಶವಿದೆ. ನಮ್ಮನ್ನು ಜಾಗೃತಿಗೊಳಿಸುವ ಶಕ್ತಿ ಇದೆ. ಧರ್ಮವನ್ನು ನಾವು ಉಳಿಸಿದರೆ ಧರ್ಮ ನಮ್ಮನ್ನು ಉಳಿಸುತ್ತದೆ. ನಾವೆಲ್ಲರೂ ಸತ್ಕಾರ್ಯಗಳನ್ನು ಮಾಡುವ ಎಂದು ನುಡಿದರು.
ಅಸೋಸಿಯೇಷನ್ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ. ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಬಳಿಕ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಶೆಟ್ಟಿಯವರ ಮುಂದಾಳತ್ವದಲ್ಲಿ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಕ್ಕೆ ಜಯರಾಮ್ ಶೆಟ್ಟಿ ಮತ್ತು ಲತಾ ಜಯರಾಮ್ ಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ನ ಉಪಾಧ್ಯಕ್ಷ ಅಡ್ವೋಕೇಟ್ ಡಿ.ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಐಕಳ ಕಿಶೋರ್ ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ ಡಿ ಶೆಟ್ಟಿ,ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಟ್ರಸ್ಟಿ ಮತ್ತು ಮಾಜಿ ಅಧ್ಯಕ್ಷರುಗಳಾದ ಎನ್ ಸಿ ಶೆಟ್ಟಿ, ಜಯರಾಮ್ ಎಸ್ ಮಲ್ಲಿ, ಟ್ರಸ್ಟಿ ಸುರೇಶ್ ಜಿ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಯರಾಮ್ ಶೆಟ್ಟಿ ಮತ್ತು ಲತಾ ಜಯರಾಮ್ ಶೆಟ್ಟಿ ಅವರನ್ನು ಗೌರವಿಸಿದರು. ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ, ಜಯಂತ್ ಕೆ ಶೆಟ್ಟಿ, ನ್ಯಾಯವಾದಿ ರತ್ನಾಕರ ವಿ ಶೆಟ್ಟಿ, ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ, ಪತ್ರಪುಷ್ಪ ಪತ್ರಿಕೆಯ ಕಾರ್ಯಾಧ್ಯಕ್ಷ ಸುನಿಲ್ ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಸುರೇಶ್ ಎನ್ ಶೆಟ್ಟಿ ಯೆಯ್ಯಾಡಿ, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ್ ಕೆ ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತಾ ಎನ್. ಶೆಟ್ಟಿ, ಕಾರ್ಯದರ್ಶಿ ಸಹಾನಿ ವಿ. ಶೆಟ್ಟಿ, ಕೋಶಾಧಿಕಾರಿ ಉಷಾ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಲಲಿತಾ ಬಿ ಶೆಟ್ಟಿ, ಜೊತೆ ಕೋಶಾಧಿಕಾರಿ ಮಾಯಾ ಎಸ್ ಆಳ್ವ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ಆರ್ ಆರ್ ಶೆಟ್ಟಿ, ಶೈಲಜಾ ಎ ಶೆಟ್ಟಿ, ಆಶಾ ಎಸ್ ಶೆಟ್ಟಿ, ಶಾರದಾ ಎಸ್ ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ನಿಶಾನ್ ಕೆ. ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಯರಾಮ್ ಶೆಟ್ಟಿ ಮತ್ತು ಲತಾ ಜಯರಾಮ್ ಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಿದರೆ, ಬಂಟ್ಸ್ ಸೆಂಟರ್ ನಲ್ಲಿ ಹೊಸದಾಗಿ ಕ್ಯಾಟರಿಂಗ್ ನಡೆಸುತ್ತಿರುವ ಹಾಗೂ ನವೀಕೃತ ಭವನವನ್ನು ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಿಕೊಂಡಿರುವ ಸತೀಶ್ ಕ್ಯಾಟರರ್ಸ್ ಮಾಲಕ ಸತೀಶ್ ಶೆಟ್ಟಿ ಮತ್ತು ಶಾಲಿನಿ ಡೆಕೋರೇಟರ್ ನ ಮಾಲಕಿ ಶಾಲಿನಿ ಸತೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ವತಿಯಿಂದ ಅಸೋಸಿಯೇಷನ್ ನ ಅಧ್ಯಕ್ಷರಾದ ಸಿಎ ಸುರೇಂದ್ರ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ರಂಗ ನಿರ್ದೇಶಕ ಲೇಖಕ ನಾರಾಯಣ ಶೆಟ್ಟಿ ನಂದಳಿಕೆ ನಿರೂಪಿಸಿದರು. ಕಿಶೋರ್ ಶೆಟ್ಟಿ ಐಕಳ ಧನ್ಯವಾದ ನೀಡಿದರು. ಆ ಬಳಿಕ ಮಹಿಳಾ ವಿಭಾಗ ಆಯೋಜಿಸಿದ ವಸ್ತು ಪ್ರದರ್ಶನ, ಸೀರೆಗಳ ಮಾರಾಟ, ವಿವಿಧ ಉಪಕರಣಗಳ ಪ್ರದರ್ಶನ, ವಿವಿಧ ವಿನ್ಯಾಸಕ ಮತ್ತು ಅಲಂಕಾರಿಕ ಸೀರೆಗಳು, ಕಾಂಜೀವರಂ, ಸೌತ್ ಕಾಟನ್, ಕಾಟನ್ ರೇಷ್ಮೆ, ಕೈ ಮಗ್ಗದ ಸೀರೆಗಳು, ಕುರ್ತಿಗಳು, ಬೆಡ್ ಶೀಟ್ ಗಳು, ಮತ್ತು ಟೆರಿನ್ ಟವೆಲ್, ಕೃತಕ ಆಭರಣಗಳು, ವಜ್ರದ ಆಭರಣಗಳು, ಉಡುಪುಗಳು, ಮತ್ತು ಇನ್ನೂ ಅನೇಕ ಆಕರ್ಷಕ ಉತ್ಪನ್ನಗಳ ಮಾರಾಟ ನಡೆಯಿತು.
ಮಧ್ಯಾಹ್ನ ಅಸೋಸಿಯೇಷನ್ ನ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ ಐಕಳ ಅವರ ಮುಂದಾಳತ್ವದಲ್ಲಿ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಮೇಳದ ಕಲಾವಿದರಿಂದ ಕಳೆದ ತಿರುಗಾಟದ ಸೂಪರ್ ಹಿಟ್ ಪ್ರಸಂಗ ಪ್ರೋ. ಪವನ್ ಕಿರಣಕೆರೆ ನಿರಚಿತ 34ನೇ ಕಲಾಕುಸುಮ ‘ಗಂಗೆ ತುಂಗೆ ಕಾವೇರಿ’ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯ ಲತಾ ಸದಾನಂದ ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು.