ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ಗೆ ಈ ವರ್ಷ 30ರ ಹರೆಯ. ಈ ಸಂದರ್ಭದಲ್ಲಿ ಅಪೂರ್ವ ಮತ್ತು ವೈಭವದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ‘ಆಳ್ವಾಸ್ ವಿರಾಸತ್-2024’ನ್ನು ಅತ್ಯಂತ ಯಶಸ್ವೀ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾಗಿರಿಯ ಆವರಣದಲ್ಲಿ ಆಳ್ವಾಸ್ ವಿರಾಸತ್-2024 ಡಿಸೆಂಬರ್ 10, 2024ನೇ ಮಂಗಳವಾರದಂದು ಪ್ರಾರಂಭವಾಗಿ ಡಿಸೆಂಬರ್ 15, 2024ನೇ ಭಾನುವಾರದಂದು ಮುಕ್ತಾಯಗೊಳ್ಳಲಿದೆ. ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ಒಟ್ಟು 6 ದಿನಗಳ ಕಾಲ ಈ ಸಾಂಸ್ಕøತಿಕ ಉತ್ಸವವು ವೈಭವೋಪೇತವಾಗಿ ಜರುಗಲಿದೆ. ಮೊದಲ 05 ದಿನಗಳು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತುಗಳೇ ಮೊದಲಾದ ವಸ್ತು ಪ್ರದರ್ಶನಗಳಿಗೆ ಅವಕಾಶವಿದ್ದು ಕೊನೆಯ ದಿನ 15.12.2024ನೇ ಭಾನುವಾರವನ್ನು ಕೇವಲ ವಸ್ತು ಪ್ರದರ್ಶನಗಳಿಗಾಗಿಯೇ ಮೀಸಲಿಡಲಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ವು ನಡೆಸುವ ಆಳ್ವಾಸ್ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್-2024’ ಗೆ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶವಿದ್ದು, ಸಂಸ್ಕೃತಿ ಪ್ರಿಯರೂ, ಕಲಾಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.