ವಿದ್ಯಾಗಿರಿ: ‘ಸ್ವಾಯತ್ತ ಎಂಬುದು ಶಿಕ್ಷಣ ಸಂಸ್ಥೆಯ ಸ್ವಯಂ ಪರಿಕಲ್ಪನೆಗಳ ಸಾಕಾರಕ್ಕೆ ದೊರೆತ ಮಹತ್ತರ ಜವಾಬ್ದಾರಿ. ಇಲ್ಲಿ ಬೋಧಕರು ನಿರಂತರ ವಿದ್ಯಾರ್ಥಿಗಳಾಗಬೇಕು’ ಎಂದು ಮಂಗಳೂರಿನ ಡಾ.ಶಿವರಾಮ ಕಾರಂತ ನಿಸರ್ಗ ಧಾಮದ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಕೆ.ವಿ.ರಾವ್ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ (ಸ್ವಾಯತ್ತ) ಶುಕ್ರವಾರ ನಡೆದ ಆಂತರಿಕ ಮೌಲ್ಯ ಖಾತರಿ ಕೋಶ (ಐಕ್ಯುಎಸಿ)ದ ಸಭೆಯಲ್ಲಿ ಅವರು ಮಾತನಾಡಿದರು. ‘ಸಂಸ್ಥೆಗಳು ತಮ್ಮ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಹಾಗೂ ಅಪಾಯದ (ಸ್ವೊಟ್) ಬಗ್ಗೆ ಸ್ವಯಂ ವಿಮರ್ಶೆ ಮಾಡಿಕೊಂಡಾಗ ಪ್ರಗತಿ ಕಾಣಲು ಸಾಧ್ಯ. ದೂರದೃಷ್ಟಿ, ಸಮಯ ನಿರ್ಬಂಧಿತ ಗುರಿ, ನಿರಂತರ ಕಲಿಕೆ ಇರಬೇಕು’ ಎಂದ ಅವರು, ‘ಕಾಲೇಜು ಎಂದರೆ ಕೇವಲ ಕಟ್ಟಡವಲ್ಲ. ಅದೊಂದು ಜೀವಂತಿಕೆಯ ಅಸ್ತಿತ್ವ’ ಎಂದರು. ‘ಕೈಗಾರಿಕೆಗಳ ಜೊತೆ ಸಂಬAಧ, ಔದ್ಯೋಗಿಕ ತರಬೇತಿ, ಕೌಶಲ ವೃದ್ಧಿ, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ. ಪಕ್ವತೆಯಲ್ಲಿ ಆಳ್ವಾಸ್ ಯಾವಾಗಲೂ ಮಾದರಿ’ ಎಂದು ಬಣ್ಣಿಸಿದರು. ಯೆನೆಪೋಯಾ ಪರಿಗಣಿತ ವಿಶ್ವವಿದ್ಯಾಲಯ ಆಯುಷ್ ಸಂಶೋಧನಾ ಕೇಂದ್ರದ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಡಾ.ಕೆ.ಆರ್. ಚಂದ್ರಶೇಖರ್ ಮಾತನಾಡಿ, ‘ಐಕ್ಯುಎಸಿ ಕಾಲೇಜಿಗೆ ಮಾದರಿಯಾದ ದೂರದೃಷ್ಟಿ ಹೊಂದಿದ ವರದಿಯನ್ನು ನಿರೂಪಿಸಬೇಕು.
ಅವುಗಳಲ್ಲಿ ಸೇರ್ಪಡೆ, ಪ್ರಕ್ರಿಯೆ ಹಾಗೂ ಫಲಿತಾಂಶದ ಬಗ್ಗೆ ಸ್ಪಷ್ಟತೆ ಇರಬೇಕು. ತನ್ನ ಕಾರ್ಯವನ್ನು ತಾನೇ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕು. ಪ್ರತಿ ವಿಭಾಗವೂ ಅಕಾಡೆಮಿಕ್ ಚಟುವಟಿಕೆಯ ಕ್ಯಾಲೆಂಡರ್ ಹೊಂದಿರಬೇಕು. ಅದನ್ನು ದಾಖಲಿಸಬೇಕು. ವಿದ್ಯಾರ್ಥಿ ಅಭಿವೃದ್ಧಿ ಕೇಂದ್ರಿತವಾಗಿರಬೇಕು’ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಅಂಕಕ್ಕಿAತ ಅತ್ಯುತ್ತಮ ವ್ಯಕ್ತಿಯನ್ನು ರೂಪಿಸುವುದು ಶಿಕ್ಷಣದ ಧ್ಯೇಯವಾಗಬೇಕು. ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸ್ವಯಂ ವಿಮರ್ಶೆ ಇರಬೇಕು. ಆರಂಭದಲ್ಲಿ ಗುರಿ ನಿಗದಿ ಮಾಡಿ, ಅಂತ್ಯದಲ್ಲಿ ಪರಾಮರ್ಶೆ ನಡೆಸುವುದು ಅವಶ್ಯ’ ಎಂದರು. ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋರ್ಸ್ನ ಧ್ಯೇಯ, ವಿದ್ಯಾರ್ಥಿಗಳ ಒಳಗೊಳ್ಳುವಿಕೆ, ಸಾಮಾಜಿಕ ಹಾಗೂ ಕೈಗಾರಿಕಾ ಚಟುವಟಿಕೆ, ಸಂಶೋಧನೆ, ಉದ್ಯಮಶೀಲತೆ, ಔದ್ಯೋಗಿಕ ಸ್ಪರ್ಶ, ಸಮಯಾಧಾರಿತ ಗುರಿ ಸಾಧನೆ, ದೂರದೃಷ್ಟಿ, ನಿರಂತರ ಕಲಿಕೆಯು ಪ್ರಾಮುಖ್ಯತೆ ಪಡೆಯುತ್ತವೆ’ ಎಂದರು. ‘ಸ್ವಾಯತ್ತ ಎಂದರೆ ಪ್ರತಿಷ್ಠೆಯಲ್ಲ, ಅದು ಹೆಚ್ಚಿನ ಜವಾಬ್ದಾರಿ’ ಎಂದರು. ಐಕ್ಯುಎಸಿ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಗುಣಮಟ್ಟ- ಮೌಲ್ಯ ವೃದ್ಧಿಗೆ ತಜ್ಞರು ನೀಡಿದ ಸಲಹೆ- ಸೂಚನೆಗಳನ್ನು ಅನುಸರಿಸಿಕೊಂಡು ಭವಿಷ್ಯದ ಚಟುವಟಿಕೆಗಳನ್ನು ಕೋಶವು ರೂಪಿಸಬೇಕು. ಆಂತರಿಕ ಗುಣಮಟ್ಟ ವೃದ್ಧಿಗೆ ಶ್ರಮಿಸಬೇಕು’ ಎಂದರು. ಐಕ್ಯುಎಸಿ ಸಂಚಾಲಕರಾದ ಡಾ. ಮೂಕಾಂಬಿಕಾ, ಮೌಲ್ಯಮಾಪನ ಕುಲಸಚಿವ ಡಾ ನಾರಾಯಣ ಶೆಟ್ಟಿ, ಕುಲಸಚಿವ (ಅಕಾಡೆಮಿಕ್ಸ್) ಡಾ. ಟಿ.ಕೆ. ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹಾಗೂ ಸದಸ್ಯರು ಇದ್ದರು.