ಬಂಟರ ಸಂಘ ಮುಂಬಯಿ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ಪ್ರಾರಂಭದಿಂದಲೇ ಸಂಘವು ವಿದ್ಯೆಗೆ ಒತ್ತು ನೀಡುತ್ತಾ ಬಂದಿದೆ. ಸಮಾಜದಲ್ಲಿ ಶೈಕ್ಷಣಿಕ ಅಭಿವೃದ್ಧಿ ಬಂಟರ ಸಂಘದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ವಿವಿಧ ರೀತಿಯ ಶಿಕ್ಷಣಕ್ಕೆ ಅವಕಾಶವಿದ್ದು ನಮ್ಮ ಮಕ್ಕಳಿಗೆ ಮಾತ್ರವಲ್ಲದೇ ಇತರ ಸಮಾಜದ ತುಳು ಕನ್ನಡಿಗ ಮಕ್ಕಳಿಗೂ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ರಿಯಾಯಿತಿ ಇದ್ದು ಸಮಾಜದ ಮಕ್ಕಳಿಗೆ ದೊರೆಯುವ ಈ ವಿಶೇಷ ರಿಯಾಯಿತಿಯ ಸದುಪಯೋಗ ಪಡೆಯಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು.
ಬಂಟರ ಸಂಘ ಮುಂಬಯಿ ವಸಾಯಿ – ದಹಾಣು ಪ್ರಾದೇಶಿಕ ಸಮಿತಿಯಿಂದ ಜೂನ್ 16 ರಂದು ನಾಲಾಸೋಪಾರ ಪಶ್ಚಿಮದ ಹೋಟೆಲ್ ಗ್ಯಾಲಕ್ಸಿ ಸಭಾಗೃಹದಲ್ಲಿ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ ಹಾಗೂ ವಿಕಲ ಚೇತನರಿಗೆ 2024 ರ ಆರ್ಥಿಕ ಸಹಾಯವನ್ನು ವಿತರಿಸಲಾಗಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಮಾಜ ಸೇವೆಯಲ್ಲಿ ಬಂಟರ ಸಂಘ ಮಾಡದ ಕೆಲಸವೇ ಇಲ್ಲ ಎಂದು ಅಭಿಮಾನದಿಂದ ಹೇಳಬಹುದು. ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗೆ ಇದೀಗ 26 ನೇ ವರ್ಷ. ಸಂಘಕ್ಕೆ ದೊಡ್ಡ ಮೊತ್ತದ ಆದಾಯವನ್ನು ನೀಡುತ್ತಿದ್ದು ಎಸ್ ಎಂ ಶೆಟ್ಟಿಯವರು, ನಮ್ಮ ಬಂಟರ ಸಂಘದ ಕಿರೀಟದ ವಜ್ರದಂತೆ. ಆ ನಂತರ ಬಂಟರ ಸಂಘದ ಎದುರೇ ಇರುವ ಉಮಾ ಕೃಷ್ಣ ಶೆಟ್ಟಿ ಮ್ಯಾನೇಜ್ಮೆಂಟ್ ಕಾಲೇಜು ಇದೆ. ರಮಾನಾಥ್ ಪಯ್ಯಡೆ ಕ್ಯಾಟರಿಂಗ್ ಕಾಲೇಜು ಇದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಾವು ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡುತ್ತೇವೆ. ಇದಲ್ಲದೇ ಪ್ರತೀ ವರ್ಷ ಸುಮಾರು ಹತ್ತು ಕೋಟಿ ರೂಪಾಯಿ ನಮ್ಮವರಿಗೆ ನಾವು ಖರ್ಚು ಮಾಡುತ್ತೇವೆ. ಇಂದು ನಮ್ಮ ಮಕ್ಕಳಿಗೆ ಸಂಘದಿಂದ ಸಿಗುವ ಸೌಲಭ್ಯಗಳು ಮೊದಲು ನಮ್ಮ ಕಾಲದಲ್ಲಿ ಸಿಗುತ್ತಿರಲಿಲ್ಲ. ಡಿಗ್ರಿಯಾಗಿ ಉನ್ನತ ಮಟ್ಟದ ಶಿಕ್ಷಣ ಮಾಡುತ್ತಿರುವವರಿಗೆ ಪ್ರತಿ ವರ್ಷ ಬಡ್ಡಿ ರಹಿತ ರೂ. 50 ಸಾವಿರದಂತೆ ಇಂಜಿನಿಯರಿಂಗ್, ಎಂಬಿಎ, ವೈದಕೀಯ, ಕಲಿಯುವವರಿಗೆ ಕೊಡುತ್ತಿದ್ದು ಅವರು ಕಲಿತು ಕೆಲಸ ಸಿಕ್ಕಿದ ನಂತರ ಅದನ್ನು ಹಿಂತಿರುಗಿಸುತ್ತಿದ್ದು ಈ ತನಕ ಸುಮಾರು 400 ಮಕ್ಕಳಿಗೆ ನಾಲ್ಕು ಕೋಟಿಗಿಂತಲೂ ಅಧಿಕ ಮೊತ್ತವನ್ನು ನೀಡಿದ್ದೇವೆ. ಅದನ್ನು ಮಕ್ಕಳು ಹಿಂತಿರುಗಿಸಿದ್ದಾರೆ. ಅನೇಕರು ಅದಕ್ಕೆ ಹೆಚ್ಚಿನ ಮೊತ್ತವನ್ನು ಸೇರಿಸಿ ಸಂಘಕ್ಕೆ ಹಿಂತಿರುಗಿಸುತ್ತಿದ್ದಾರೆ. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಮತ್ತವರ ತಂಡ ಹಾಗೂ ಇತರ ಪದಾಧಿಕಾರಿಗಳು ಈ ಸಲ ದೊಡ್ಡ ಮಟ್ಟದ ಮೊತ್ತವನ್ನು ಸಂಗ್ರಹಿಸಿದ್ದು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಯಶಸ್ಸಿಗೆ ದಾನಿಗಳ ಕೊಡುಗೆಯೂ ಮುಖ್ಯ ಕಾರಣ ಎಂದರು.
ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧಕ್ಷೆ ಜಯ ಅಶೋಕ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮವು ಆ ದಿನ ವಿಶ್ವ ಅಪ್ಪಂದಿರ ದಿನವಾಗಿದ್ದು ಮಕ್ಕಳೊಂದಿಗೆ ಆಗಮಿಸಿದ ಅವರ ತಂದೆಯವರು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ವೇದಿಕೆಯಲ್ಲಿ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಮುಂಬಯಿ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ ಕೆ. ಶೆಟ್ಟಿ ಇನ್ನಂಜೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ, ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಸಿಎ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಪಶ್ಚಿಮ ವಲಯ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಖಾಂದೇಶ್, ಯುವ ವಿಭಾಗದ ಉಪ ಉಪಾಧ್ಯಕ್ಷ ತಾರಾನಾಥ ಶೆಟ್ಟಿ, ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಜಯ ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕು. ವರ್ಷಾ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ಜಯಂತ್ ಪಕ್ಕಳ, ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಪಳ್ಳಿ, ಸಲಹೆ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ರತೀಶ್ ಶೆಟ್ಟಿ, ಮೋಹನ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ವೀಣಾ ಶೆಟ್ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುಮಾರು ಒಟ್ಟು 21 ಲಕ್ಷ ಆರ್ಥಿಕ ಧನ ಸಹಾಯ ಚೆಕ್ಕನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮತ್ತು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಲೀಲಾವತಿ ಆಳ್ವ ಅವರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ವಸಾಯಿ- ಡಾಹಾಣು ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್ ಮತ್ತು ವಿಜಯ ಶೆಟ್ಟಿ ಕುತ್ತೆತ್ತೂರು ನಿರೂಪಿಸಿದರು. ಜಗನ್ನಾಥ ಶೆಟ್ಟಿ ಪಳ್ಳಿ ಧನ್ಯವಾದಗೈದರು.