ಪ್ರತಿಷ್ಠಿತ ಡಾ. ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ 2022-2023 ನೇ ಸಾಲಿನ ವಿಕಾಸ ಪುಸ್ತಕ ಪುರಸ್ಕಾರವನ್ನು ಯುವ ಪತ್ರಕರ್ತ, ಲೇಖಕ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರಿಗೆ ಮಾ. 16 ರಂದು ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ ವಿದ್ಯಾನಗರಿಯ ತಿಲಕ್ ಭವನದ ಭೂಗೋಳ ವಿಭಾಗದ ಸಭಾಗೃಹದಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರಧಾನ ಮತ್ತು ಕೃತಿ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿಸಲಾಯಿತು.
ಡಾ. ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ, ಹಿರಿಯ ಸಾಹಿತಿ ಡಾ. ವಿಶ್ವನಾಥ್ ಕಾರ್ನಾಡ್ ಅವರ ಉಪಸ್ಥಿತಿ ಹಾಗು ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಸಿದ್ಧ ಜನಪದ ವಿದ್ವಾಂಸ, ಸಾಹಿತಿ ಡಾ. ಕಾಳೇಗೌಡ ನಾಗವಾರ, ಹಿರಿಯ ತಂತ್ರಜ್ಞ ಮತ್ತು ಅನುವಾದಕ ವೆಂಕಟ್ರಾಜ್ ಅವರು ಪಾಲ್ಗೊಂಡು ಡಾ. ದಿನೇಶ್ ಶೆಟ್ಟಿಯವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ, ಗೌರವ ಗ್ರಂಥ, ನಗದು ಬಹುಮಾನದೊಂದಿಗೆ ಪುರಸ್ಕಾರವನ್ನು ಪ್ರಧಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ. ಶ್ಯಾಮಲಾ ಪ್ರಕಾಶ್, ನ್ಯಾಯವಾದಿ ಅಮಿತಾ ಭಾಗ್ವತ್, ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಶೆಟ್ಟಿ ಹಾಗೂ ಕಾರ್ನಾಡ್ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.
ಪ್ರತಿ ವರ್ಷ ಮೂರು ಅತ್ಯುತ್ತಮ ಕೃತಿಗಳಿಗೆ ಕಾರ್ನಾಡ್ ಪ್ರತಿಷ್ಠಾನ ವಿಕಾಸ ಪುಸ್ತಕ ಪುರಸ್ಕಾರವನ್ನು ನೀಡುತ್ತಿದೆ. ಪ್ರಸ್ತುತ ವರ್ಷ ಡಾ. ದಿನೇಶ್ ಶೆಟ್ಟಿ ರೆಂಜಾಳ, ಡಾ. ಶ್ಯಾಮಲಾ ಪ್ರಕಾಶ್ ಮತ್ತು ಅಮಿತಾ ಭಾಗ್ವತ್ ಅವರ ಕೃತಿಗಳು ಆಯ್ಕೆಯಾಗಿತ್ತು. ರೆಂಜಾಳರ “ಮುಂಬೈ ಕನ್ನಡ ಪತ್ರಿಕೋದ್ಯಮ” ಸಂಶೋಧನ ಕೃತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಈ ಗ್ರಂಥಕ್ಕೆ ಮುಂಬೈ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ. 500 ಕ್ಕೂ ಅಧಿಕ ಪುಟಗಳನ್ನು ಹೊಂದಿರುವ ಈ ಕೃತಿ ಕಳೆದ ವರ್ಷ ಬಿಡುಗಡೆಗೊಂಡಿತ್ತು. ಕೃತಿಯು ಮುಂಬೈ ಕನ್ನಡ ಪತ್ರಿಕೋದ್ಯಮದ ನೂರೈವತ್ತಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಹಿರಿಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.