ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಭಜನೆ, ಕುಣಿತ ಭಜನೆಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಆಯೋಜಿಸುವುದರಿಂದ ಮಕ್ಕಳಲ್ಲಿ ಧರ್ಮ, ದೇವರ ಮೇಲೆ ಭಕ್ತಿ ಶ್ರದ್ಧೆ ಹೆಚ್ಚಾಗುತ್ತದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ತಿಳಿಸಿದರು.
ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಮಹಿಳಾ ವಿಭಾಗವು ಜುಯಿ ನಗರದ ಬಂಟ್ಸ್ ಸೆಂಟರ್ ನಲ್ಲಿ ಆಯೋಜಿಸಿದ್ದ ಭಜನೆ ಮತ್ತು ಕುಣಿತ ಭಜನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ಸ್ ಅಸೋಸಿಯೇಶನ್ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಹಿಳಾ ವೇದಿಕೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಇಂದಿನ ಕಾಲಘಟ್ಟದಲ್ಲಿ ಇಂತಹ ಧಾರ್ಮಿಕ ಯೋಜನೆ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಶ್ರೀ ಕ್ಷೇತ್ರ ಒಡಿಯೂರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷೆ ಶ್ವೇತಾ ಚಂದ್ರಹಾಸ್ ರೈ ಮಾತನಾಡಿ, ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆಯೊಂದಿಗೆ ಉತ್ತಮ ಜೀವನ ನಡೆಸಲು ಪ್ರೇರೇಪಿಸುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿರಬೇಕು. ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತಿದೆ ಎಂದರು.
ಅತಿಥಿಯಾಗಿದ್ದ ಸಮಾಜ ಸೇವಕಿ ಸೀಮಾ ಕಿಶೋರ್ ರಾವ್ ಮಾತನಾಡಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ಮಹಿಳಾ ವಿಭಾಗದ ಕಾರ್ಯ ಶ್ಲಾಘನೀಯ ಎಂದು ತಿಳಿಸಿ ಶುಭ ಹಾರೈಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ ಪ್ರಸ್ತಾವಿಸಿದರು. ಭಜನೆ ಹಾಗೂ ಕುಣಿತ ಭಜನೆಯಲ್ಲಿ ವಿಜೇತರಾದ ತಂಡಗಳಿಗೆ ಅತಿಥಿಗಳು ಫಲಕ ಹಾಗೂ ನಗದು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಉಪಾಧ್ಯಕ್ಷ ನ್ಯಾಯವಾದಿ ಡಿಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಜತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ್ ಶೆಟ್ಟಿ, ಜತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ, ಗೌರವ ಕಾರ್ಯದರ್ಶಿ ಉಷಾ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಸಹಾನಿ ಶೆಟ್ಟಿ, ಜತೆ ಕಾರ್ಯದರ್ಶಿ ಲಲಿತಾ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಮಾಯಾ ಆಳ್ವ, ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯಾ ಶೆಟ್ಟಿ ಉಪಸ್ಥಿತರಿದ್ದರು.
ಪತ್ರಕರ್ತ ದಯಾಸಾಗರ್ ಚೌಟ ಕಾರ್ಯಕ್ರಮವನ್ನು ನಿರೂಪಿಸಿ, ಮಹಿಳಾ ವಿಭಾಗದ ಗೌರವ ಕೋಶಾಧಿಕಾರಿ ಸಹಾನಿ ವಿ. ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.