ಚಿಣ್ಣರಬಿಂಬ ಮುಂಬಯಿ ಇದರ ಶಿಬಿರಗಳಲ್ಲಿ ಒಂದಾದ ಭಯಂದರ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆಯು ಅಗಸ್ಟ್ 27 ರಂದು ರವಿವಾರ ಬೆಳಿಗ್ಗೆ 9.30 ರಿಂದ ನ್ಯೂ ಸೈಂಟ್ ಆಗ್ನೆಸ್ ಹೈಸ್ಕೂಲ್ ಶಕ್ತಿನಗರ ಎಸ್ ಎನ್ ಕಾಲೇಜ್ ನ ಹತ್ತಿರ ಭಯಂದರ್ ಪೂರ್ವದಲ್ಲಿ ಚಿಣ್ಣರ ಬಿಂಬದ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಶಿಬಿರದ ಮಕ್ಕಳ ಭಜನೆ, ಶಾರದ ಪೂಜೆ, ಗಣಪತಿ ಸ್ತುತಿಯೊಂದಿಗೆ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮ ಆರಂಭಗೊಂಡಿತು. ಭಾಷಣ, ಭಾವಗೀತೆ, ಜಾನಪದ ಗೀತೆ, ಏಕಪಾತ್ರಾಭಿನಯ, ಛದ್ಮವೇಷ, ಪಾಲಕರಿಗಾಗಿ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಿತು. ಶಿಬಿರದ ಮುಖ್ಯಸ್ಥೆ ಜಯಲಕ್ಷ್ಮಿ ಪಿ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು.
ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವನ್ನು ಹೋಟೆಲ್ ಉದ್ಯಮಿ ಶ್ರೀ ಜೈ ಕಿರಣ್ ಅರುಣೋದಯ ರೈಯವರು ಉದ್ಘಾಟಿಸಿದರು. ಶಿಬಿರದ ಚಿಣ್ಣರಿಂದ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಚಿಣ್ಣರ ಬಿಂಬದ ತನ್ನ ವಿದ್ಯಾರ್ಥಿ ಜೀವನದ ದಿನವನ್ನು ಮೆಲುಕು ಹಾಕುತ್ತಾ, ನಾನು ಇಲ್ಲಿ ತುಂಬಾ ಕಲಿತಿದ್ದೇನೆ. ನಾವೆಲ್ಲರೂ ಇದರ ಪ್ರಯೋಜನವನ್ನು ಇನ್ನಷ್ಟು ತುಳು ಕನ್ನಡಿಗರಿಗೆ ಸಿಗುವಂತೆ ಪ್ರಯತ್ನಿಸೋಣ ಎಂದರು. ಕೇಂದ್ರ ಸಮಿತಿಯ ಸದಸ್ಯೆ ಶ್ರೀಮತಿ ವಿಶಾಲಾಕ್ಷಿ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಮೀರಾ ಭಯಂದರ್ ನ ಜೊತೆ ಕೋಶಾಧಿಕಾರಿಯಾಗಿರುವ ಶ್ರೀ ರಮೇಶ ಎಂ ಶೆಟ್ಟಿ ಸಿದ್ದಕಟ್ಟೆ ಇವರು ಮಾತನಾಡಿ, ಮಕ್ಕಳು ತಮ್ಮ ಸುತ್ತಮುತ್ತಲಿನ ಎಲ್ಲಾ ಚಟುವಟಿಕೆಗಳನ್ನು ಬಹುಬೇಗನೆ ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ. ಸಂಸ್ಕಾರ ಕಲಿತ ವ್ಯಕ್ತಿ ಯಾವತ್ತೂ ಕೆಟ್ಟವನಾಗಲಾರನು. ಮಕ್ಕಳನ್ನು ಶಿಕ್ಷಿಸದೆ ಪ್ರೀತಿಯಿಂದ ತಾಳ್ಮೆಯಿಂದ ನೋಡಿಕೊಳ್ಳಿ. ಮಕ್ಕಳನ್ನು ಪೋಷಿಸುವ ಕೆಲಸ ಪಾಲಕರದ್ದಾದರೂ ಚಿಣ್ಣರ ಬಿಂಬ ಈ ಕೆಲಸ ಮಾಡುತ್ತಿದೆ ಎಂದರು.
ಎಂ ಬಿ ಆರ್ ಗ್ಲೋಬಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮೈಂಡ್ ಸ್ಪೇಸ್, ಮಲಾಡ್ ವೆಸ್ಟ್ ಇದರ ಸ್ಥಾಪಕರಾದ ಶ್ರೀ ವಿಜಯ್ ಬಾಲಕೃಷ್ಣ ರಾವ್ ಇವರು ಮಾತನಾಡಿ, ತುಂಬಾ ಆತ್ಮವಿಶ್ವಾಸದಿಂದ ವೇದಿಕೆಯಲ್ಲಿ ಬಂದು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳು ಪಾಲಕರಿಲ್ಲದೆ ಇದೆಲ್ಲ ಸಾಧ್ಯವಿಲ್ಲ ಮಕ್ಕಳನ್ನು ತಿದ್ದಿ ತೀಡಿ ಸಂಸ್ಕಾರ ಸಂಸ್ಕೃತಿ ಕೊಟ್ಟು ಸಲಹಿದ ಎಲ್ಲಾ ಶಿಕ್ಷಕರಿಗೂ ಪಾಲಕರಿಗೂ ಹಾಗೂ ಚಿಣ್ಣರ ಬಿಂಬ ಸಂಸ್ಥೆಗೂ ಅಭಿನಂದನೆಗಳನ್ನು ತಿಳಿಸಿದರು.
ಕರ್ನಾಟಕ ಮಹಾಮಂಡಲ ಮೀರಾ ಭಯಂದರ್ ಇದರ ಸ್ಥಾಪಕರಾದ ಶ್ರೀ ಚಂದ್ರಶೇಖರ್ ವಿ ಶೆಟ್ಟಿ ಅವರು ಮಾತನಾಡಿ, ಚಿಣ್ಣರ ಬಿಂಬದ ಶಿಕ್ಷಕನಾಗುವ ಆಸೆ ಇತ್ತು. ಸಮಯದ ಅಭಾವದಿಂದ ಅದು ಆಗಲಿಲ್ಲ. ಪಾಲಕರು, ಶಿಕ್ಷಕರು ಚಿಣ್ಣರ ಬಿಂಬದಲ್ಲಿ ಕಲಿಸಿದ ಸಂಸ್ಕೃತಿ ಸಂಸ್ಕಾರ ಮಕ್ಕಳಲ್ಲಿ ಪ್ರತಿಬಿಂಬಿಸುತ್ತಿದ್ದು, ಇದಕ್ಕೆ ಕಾರಣಕರ್ತರಾದ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿ ಅಣ್ಣನವರಿಗೆ ಒಮ್ಮೆ ಎದ್ದು ನಿಂತು ಸೆಲ್ಯೂಟ್ ಮಾಡಿರಿ ಎಂದರು. ಯಾವುದೇ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಮಾಡುವ ವ್ಯಕ್ತಿಗಳನ್ನು ಯಾವತ್ತೂ ಮರೆಯಬಾರದು. ಪಾಲಕರಿಗೆ ಅವಕಾಶ ಕೊಡುವಂತಹ ಏಕೈಕ ಸಂಸ್ಥೆ ಚಿಣ್ಣರ ಬಿಂಬ ಎಂದರು.
ಅರುಣ್ ಕಾಮರ್ಸ್ ಕ್ಲಾಸಸ್ ಭಯಂದರ್ ಈಸ್ಟ್ ಇದರ ಸ್ಥಾಪಕರಾದ ಶ್ರೀ ಅರುಣ್ ಟಿ ಪಕ್ಕಳರವರು ಮಾತನಾಡಿ,
ಸಾಧನೆಗೆ ಮಿತಿ ಇಲ್ಲ. ಕಲಿತ ಶಾಲೆಗೆ ಹೋಗುವಾಗ ಈಗಲೂ ಮೆಟ್ಟಿಲ ಮಣ್ಣನ್ನು ಹಣೆಗೆ ತಾಗಿಸಿ ಮುಂದುವರೆಯುತ್ತೇವೆ. ಯಾವುದೇ ಪದವಿ ಪಡೆದರೂ ತಾವು ಕಲಿತ ಶಾಲೆ ಸಂಸ್ಥೆಗಳನ್ನು ಯಾವತ್ತು ಮರೆಯಬೇಡಿ. ತನ್ನ ಮಕ್ಕಳನ್ನು ಚಿಣ್ಣರ ಬಿಂಬಕ್ಕೆ ಸೇರಿಸದೆ ನಾನು ಪಶ್ಚತಾಪ ಪಡುತ್ತಿದ್ದೇನೆ. ಇಂತಹ ಒಳ್ಳೇ ಕೆಲಸ ಮಾಡುತ್ತಿರುವ ಪ್ರಕಾಶಣ್ಣನಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದರು.
ಮಾಟುಂಗಾ ಲಯನ್ಸ್ ಪಯೋನಿಯರ್ ಇಂಗ್ಲಿಷ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜ್ ನ ಮಾಜಿ ಪ್ರಾಂಶುಪಾಲರಾದ ಶ್ರೀಮತಿ ಸುಮತಿ ಎಸ್ ಶೆಟ್ಟಿಯವರು ಮಾತನಾಡಿ, ಚಿಣ್ಣರ ಬಿಂಬದ ಕಾರ್ಯಕ್ರಮ ಆನ್ಲೈನ್ ನಲ್ಲಿ ನೋಡ್ತಾ ಇದ್ದೆ ಈಗ ವಾಸ್ತವವಾಗಿ ನೋಡಿದೆ. ಭಾಗವಹಿಸಿದ ಎಲ್ಲಾ ಮಕ್ಕಳು ತುಂಬಾ ಪ್ರತಿಭಾವಂತರು. ಮಕ್ಕಳೇ ಗುರಿಯನ್ನು ತಲುಪುವುದೇ ನಮ್ಮ ಮುಖ್ಯ ಉದ್ದೇಶವಾಗಬೇಕು ಎಂದು ಚಿಣ್ಣರ ಬಿಂಬದ ಸಾಧನೆಯನ್ನು ಶ್ಲಾಘಿಸಿದರು. ಅಯ್ಯಪ್ಪ ಭಕ್ತವೃಂದ ಶಿರಡಿನಗರ್ ಭಯಂದರ್ ಈಸ್ಟ್ ಇದರ ಅಧ್ಯಕ್ಷರಾಗಿರುವ ಶ್ರೀ ಸತೀಶ್ ಜೆ ಪೂಜಾರಿಯವರು ಮಾತನಾಡಿ, ಮಕ್ಕಳು ಮಾತ್ರ ಅಲ್ಲದೆ ಪಾಲಕರಿಗೂ ಈ ಸಂಸ್ಥೆಯಲ್ಲಿ ಅವಕಾಶ ಸಿಗುತ್ತದೆ. ಮುಂಬಯಿ ಮಹಾನಗರದಲ್ಲಿ ಚಿಣ್ಣರ ಬಿಂಬದಿಂದ ಸಂಸ್ಕೃತಿ ಸಂಸ್ಕಾರ ಉಳಿಯುತ್ತಾ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ತನ್ನ ಮಕ್ಕಳನ್ನು ಸಹ ಈ ಸಂಸ್ಥೆಗೆ ಸೇರಿಸಲು ಉತ್ಸುಕನಾಗಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಮೀರಾ ಭಯಂದರ್ ನ ಮಾಜಿ ಕಾರ್ಪೊರೇಟರ್ ಆಗಿರುವ ಶ್ರೀಯುತ ಅರವಿಂದ್ ಆನಂದ್ ಶೆಟ್ಟಿ ಅವರು ಮಾತನಾಡಿ, ಪ್ರಕಾಶಣ್ಣನ ಚಿಂತನೆ ಬಹಳ ಒಳ್ಳೆಯದು. ಭವಿಷ್ಯದಲ್ಲಿ ಕಲ್ಲಿನಿಂದ ಏಟು ತಿಂದು ಮೂರ್ತಿಯಾಗಿ ಪರಿವರ್ತನೆಯಾಗುವ ಹಾಗೆ ಈ ಸಂಸ್ಥೆಯ ಮಕ್ಕಳು ಮುಂದೆ ಒಂದು ದಿನ ಉತ್ತಮ ಪ್ರಜೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಕಲಿಸುವ ಶಿಕ್ಷಕರು ಹಾಗೂ ಪಾಲಕರಿಗೆ ದೊಡ್ಡ ವಂದನೆಗಳು. ಸಂಸ್ಕಾರ, ಸಂಸ್ಕ್ರತಿ,ಶಿಸ್ತು ಇಲ್ಲಿನ ಮಕ್ಕಳಲ್ಲಿ ಎದ್ದು ಕಾಣುತ್ತಿದೆ. ನೀವು ಸಹ ಮುಂದೊಂದು ದಿನ ತನ್ನಂತೆ ನಾಯಕರಾಗುತ್ತೀರಿ ಎಂದು ನುಡಿದರು.
ವೇದಿಕೆಯಲ್ಲಿ ಪ್ರಾದೇಶಿಕ ಮುಖ್ಯಸ್ಥೆ ವಿನಯ ಶೆಟ್ಟಿ ಹಾಗೂ ವಲಯ ಮುಖ್ಯಸ್ಥೆ ಆಶಾಲತಾ ಕೊಠಾರಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಆಗಮಿಸಿದ ಶ್ರೀಮತಿ ಸುಜಾತಾ ಶೆಟ್ಟಿ ಅವರು ಮಾತನಾಡಿ ಶಿಕ್ಷಕರ ಹಾಗೂ ಪಾಲಕರ ಪ್ರೋತ್ಸಾಹದಿಂದ ಮಕ್ಕಳ ಪ್ರತಿಭೆ ಹೊರಬರುತ್ತಿದೆ. ಇದಕ್ಕೆ ಚಿಣ್ಣರ ಬಿಂಬ ನಿಮಗೆ ಸೂಕ್ತ ವೇದಿಕೆಯನ್ನು ನೀಡಿದೆ. ಇದನ್ನು ಹೀಗೆ ಮುಂದುವರಿಸಿಕೊಂಡು ಹೋದರೆ ನೀವು ಜೀವನದಲ್ಲಿ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದರು. ಇನ್ನೋರ್ವ ತೀರ್ಪುಗಾರರಾದ ಶ್ರೀಮತಿ ಅಕ್ಷತಾ ದೇಶಪಾಂಡೆಯವರು ಮಾತನಾಡಿ, ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಮೊದಲ ಸಲ ಚಿಣ್ಣರ ಬಿಂಬದ ಕಾರ್ಯಕ್ರಮಕ್ಕೆ ಬಂದಿರುತ್ತೇನೆ. ಮಕ್ಕಳಿಗಾಗಿ ಸ್ವಯಂ ಸೇವಕರು ಎಷ್ಟೊಂದು ಕಷ್ಟ ಪಡುತ್ತಿದ್ದಾರೆ . ವೇದಿಕೆ ಮೇಲೆ ನಿಂತು ಪ್ರೇಕ್ಷಕರನ್ನು ಎದುರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇಂತಹ ಅವಕಾಶವನ್ನು ನಿಮಗೆ ಚಿಣ್ಣರ ಬಿಂಬ ಮಾಡಿಕೊಡುತ್ತಿದೆ ಇನ್ನೂ ಹೆಚ್ಚಿನ ಮಕ್ಕಳು ಇದರ ಉಪಯೋಗ ಪಡೆಯುವಂತಾಗಲಿ. ಕನ್ನಡ ನಮ್ಮ ಅಭಿಮಾನದ ಭಾಷೆ ಎಂದರು.
ಶಿಬಿರದ ಚಿಣ್ಣರು ಜಾನಪದ ನೃತ್ಯ ಪ್ರದರ್ಶನ ನೀಡಿದರು. 10 ನೇ ಹಾಗೂ 12 ನೇ ತರಗತಿಯಲ್ಲಿ ಉತ್ತೀರ್ಣರಾದ ಚಿಣ್ಣರ ಬಿಂಬದ ಮಕ್ಕಳನ್ನು ಗೌರವಿಸಲಾಯಿತು. ಕಳೆದ ವರ್ಷದ ಶಿಬಿರ ಮುಖ್ಯಸ್ಥೆ ಅಮಿತಾ ಶೆಟ್ಟಿ ಹಾಗೂ ಸಾಂಸ್ಕೃತಿಕ ಮುಖ್ಯಸ್ಥೆ ಕುಶಲ ಪೂಜಾರಿ ಇವರನ್ನು ಗೌರವಿಸಲಾಯಿತು. ಚಿಣ್ಣರಾದ ಗೆಹನಾ ಶೆಟ್ಟಿ, ಸಾಕ್ಷಿ ಶೆಟ್ಟಿ, ಸಾಗರ್ ಪೂಜಾರಿ, ವಂಶಿ ಶೆಟ್ಟಿ, ತನ್ವಿ ಶೆಟ್ಟಿ, ಖುಶಿ ಶೆಟ್ಟಿ ಪ್ರಜ್ಯೋತ್ ಶೆಟ್ಟಿ, ನಿಹಾಲ್ ಪೂಜಾರಿ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮವನ್ನು ರಕ್ಷಿತ್ ಶೆಟ್ಟಿ ಹಾಗೂ ಪ್ರಾಚಿ ಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕಾಂದಿವಲಿ ಶಿಬಿರದ ಆಶಾ ಮೊಗವೀರ, ಆಶಾ ಚೇವರ್, ಹಾಗೂ ಮೀರಾ ರೋಡ್ ಶಿಬಿರದ ಶರ್ಮಿಳಾ ಶೆಟ್ಟಿ ಇವರು ನಡೆಸಿಕೊಟ್ಟರು.
ಮಕ್ಕಳ ಪ್ರತಿಭಾ ಸ್ಫರ್ಧೆಯ ವಿಜೇತರ ಪಟ್ಟಿ :
ಭಾಷಣ ಸ್ಪರ್ಧೆ: (ಜೂನಿಯರ್)
ಪ್ರಥಮ- ಸಾನ್ವಿ ಎಸ್ ಶೆಟ್ಟಿ
ದ್ವಿತೀಯ- ಆರೋಹಿ ಶೆಟ್ಟಿ
ತೃತೀಯ-ಮನ್ವಿತ್ ಪೂಜಾರಿ
ಚರ್ಚಾ ಸ್ಪರ್ಧೆ: (ಸೀನಿಯರ್)
ಪ್ರಥಮ: ಆರಾಧ್ಯ ಶೆಟ್ಟಿ
ದ್ವಿತೀಯ: ನಮನ್ ಶೆಟ್ಟಿ
ತೃತೀಯ: ಸಾನ್ವಿ ಎಸ್ ಶೆಟ್ಟಿ
ಜಾನಪದ ಗೀತೆ: (ಜೂನಿಯರ್)
ಪ್ರಥಮ: ಮನ್ವಿತ್ ಪೂಜಾರಿ
ದ್ವಿತೀಯ: ಆರೋಹಿ ಶೆಟ್ಟಿ
ತೃತೀಯ: ವಿಖ್ಯಾತ್ ಶೆಟ್ಟಿ
ಭಾವಗೀತೆ: (ಸೀನಿಯರ್)
ಪ್ರಥಮ: ಆರಾದ್ಯ ಶೆಟ್ಟಿ
ದ್ವಿತೀಯ: ಸಾನ್ವಿ ಶೆಟ್ಟಿ
ತೃತೀಯ: ನಮನ್ ಶೆಟ್ಟಿ
ಏಕಪಾತ್ರಾಭಿನಯ : (ಸೀನಿಯರ್)
ಪ್ರಥಮ: ಸಾನ್ವಿ ಎಸ್ ಶೆಟ್ಟಿ
ದ್ವಿತೀಯ: ಚಿರಶ್ರೀ ಬಂಜನ್
ತೃತೀಯ: ಆರಾಧ್ಯ ಶೆಟ್ಟಿ
ಛದ್ಮವೇಷ ಸ್ಪರ್ಧೆ : (ಜೂನಿಯರ್)
ಪ್ರಥಮ: ಆರೋಹಿ ಶೆಟ್ಟಿ
ದ್ವಿತೀಯ: ಸಾನ್ವಿ ಶೆಟ್ಟಿ
ತೃತೀಯ: ಸ್ವರ್ಣಿಕ್ ಗೌಡ
ಪಾಲಕರ ದೇಶಭಕ್ತಿ ಗೀತೆ
ಪ್ರಥಮ: ಜಯಲಕ್ಷ್ಮಿ ಶೆಟ್ಟಿ
ದ್ವಿತೀಯ: ದಿವ್ಯ ಶೆಟ್ಟಿ
ತೃತೀಯ: ಪ್ರಿಯಾಂಕಾ ಶೆಟ್ಟಿ
ಸಾಂಸ್ಕೃತಿಕ ಮುಖ್ಯಸ್ಥೆ ಶ್ರೀಮತಿ ಸುಚಿತ್ರ ಎಚ್ ಪೂಜಾರಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಭಯಂದರ್ ಶಿಬಿರದ ಎಲ್ಲಾ ಪಾಲಕರು ಮಕ್ಕಳು, ಶಿಕ್ಷಕರು, ಸ್ವಯಂ ಸೇವಕರು ಹಳೆ ವಿದ್ಯಾರ್ಥಿಗಳು ಕಾರಣರಾದರು. ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಜನಗಣ ಮನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.