ಮುಲುಂಡ್ ಪರಿಸರದ ಸಾಮಾಜಿಕ ಸೇವಾ ಸಂಸ್ಥೆ ಮುಲುಂಡ್ ಬಂಟ್ಸ್ ವತಿಯಿಂದ ನವೆಂಬರ್ 23 ಸೋಮವಾರದಂದು ಮುಲುಂಡ್ ಬಂಟ್ಸ್ ನ ಕಚೇರಿಯಲ್ಲಿ ಗೋಪೂಜೆ ಹಾಗೂ ತುಳಸಿ ಪೂಜೆಯೊಂದಿಗೆ ಮಾಸಿಕ ಭಜನಾ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಸದಸ್ಯರು ಹಾಗೂ ಭಕ್ತರು ಭಾಗವಹಿಸಿ, ಗೋಪೂಜೆ, ತುಳಸಿ ಪೂಜೆ ಮತ್ತು ಭಜನಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಕಾರ್ಯಕ್ರಮವು ಭಕ್ತಿಪೂರ್ಣ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ಮುಲುಂಡ್ ಬಂಟ್ಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಪ್ರಭಾ ಕೆ ಶೆಟ್ಟಿ ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.




ಮುಲುಂಡ್ ಬಂಟ್ಸ್ ನ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ ಮಾಗಂತಡಿ ಅವರು ಮಾತನಾಡಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲಿ ಮುಲುಂಡ್ ಬಂಟ್ಸ್ ನ ಮಹಿಳಾ ವಿಭಾಗದ ಕೊಡುಗೆ ಅಪಾರ. ಧಾರ್ಮಿಕ ಚಿಂತನೆಯಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ತವರೂರಿನಲ್ಲಿ ನಾವೆಲ್ಲರೂ ಆಚರಿಸಿಕೊಳ್ಳುತ್ತಿದ್ದ ತುಳಸಿಪೂಜೆ, ಗೋಪೂಜೆ ಇನ್ನಿತರ ಆಚರಣೆಗಳನ್ನು ನಾವೆಲ್ಲರೂ ಕರ್ಮಭೂಮಿಯಲ್ಲೂ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಆಧ್ಯಾತ್ಮಿಕ ವಿಭಾಗದ ಕಾರ್ಯಧ್ಯಕ್ಷೆ ಜಯಂತಿ ಎಂ ಶೆಟ್ಟಿ ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ರುಚಿಕರವಾದ ಪ್ರಸಾದವನ್ನು ವಿತರಿಸಲಾಯಿತು. ಧಾರ್ಮಿಕ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ, ಆಧ್ಯಾತ್ಮಿಕ ಚಿಂತನೆಗೆ ಪ್ರೋತ್ಸಾಹ ನೀಡುವ ಹಾಗೂ ಸಮುದಾಯದ ಸದಸ್ಯರ ನಡುವೆ ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವರದಿ : ಗುರುದತ್ ಪೂಂಜಾ ಮುಂಡ್ಕೂರು


















































































































