ರಾಮಾಯಣದ ಅಲಕ್ಷಿತ ಪಾತ್ರವೆಂದು ಗುರುತಿಸಲ್ಪಡುವ ಊರ್ಮಿಳೆಯ ನೋವು, ಭಾವನೆ, ತ್ಯಾಗ ಹಾಗೂ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ರಂಗಭೂಮಿಯ ಮೂಲಕ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ ‘ಅಯನಾ ಪ್ರೆಸೆಂಟ್ಸ್ -ಊರ್ಮಿಳಾ’ ಏಕವ್ಯಕ್ತಿ ರಂಗಪ್ರಯೋಗವು ಆಳ್ವಾಸ್ನ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಏಕವ್ಯಕ್ತಿ ರಂಗಪ್ರಯೋಗದಲ್ಲಿ ವಿದುಷಿ ಅಯನಾ ವಿ ರಮಣ್ ತಮ್ಮ ಅಭಿನಯ, ಭಾವಾಭಿವ್ಯಕ್ತಿ, ಧ್ವನಿ ಹಾಗೂ ದೇಹಭಾಷೆಯ ಮೂಲಕ ಊರ್ಮಿಳಾ, ಲಕ್ಷ್ಮಣ, ಶ್ರುತಕೀರ್ತಿ, ಕೈಕೆ ವಿವಿಧ ಪಾತ್ರಗಳ ಭಾವಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ಪಾತ್ರದ ನೋವು, ವಿರಹ, ತ್ಯಾಗ ಹಾಗೂ ಆಂತರಿಕ ಸಂಘರ್ಷಗಳನ್ನು ಪ್ರೇಕ್ಷಕರಿಗೆ ಮನ ಮುಟ್ಟುವಂತೆ ತಲುಪಿಸುವಲ್ಲಿ ಯಶಸ್ವಿಯಾದರು. ರಾಮಾಯಣ ಹಾಗೂ ಮಹಾಭಾರತದ ಪ್ರಮುಖ ಪಾತ್ರಗಳೊಂದಿಗೆ ಅಲಕ್ಷಿತ ಪಾತ್ರಗಳ ಭಾವನೆ, ಸಂಘರ್ಷ ಮತ್ತು ಒಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಒಬ್ಬ ಕಲಾವಿದೆ ಏಕಾಂಗಿಯಾಗಿ ವಿವಿಧ ಭಾವಭಂಗಿ ಹಾಗೂ ಅಭಿನಯದ ಮೂಲಕ ಪಾತ್ರದ ಹಲವು ಆಯಾಮಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿರುವುದು ವಿಶೇಷ. ಅಯನಾರವರ ಅಭಿನಯದಲ್ಲಿ ಪಾತ್ರದ ಭಾವನೆಗಳು ಸಹಜವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರನ್ನು ಕಥೆಯೊಳಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಪ್ರಯೋಗದ ನಿರ್ದೇಶಕ ಹಾಗೂ ವಿನ್ಯಾಸಗಾರ ಡಾ| ಶ್ರೀಪಾದ ಭಟ್ ಮಾತನಾಡಿ, ಪೌರಾಣಿಕ ಕಥನಗಳನ್ನು ಕೇವಲ ಇತಿಹಾಸ ಅಥವಾ ವಾಸ್ತವಾಂಶಗಳ ನೆಲೆಯಲ್ಲಿ ನೋಡದೆ, ಅವುಗಳಲ್ಲಿರುವ ಆಂತರಿಕ ಸಂಘರ್ಷಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿ – ಮನುಷ್ಯ, ದೇವರು – ಮನುಷ್ಯ, ಸಮಾಜ – ವ್ಯಕ್ತಿ ಹಾಗೂ ಪ್ರಭುತ್ವ – ವ್ಯಕ್ತಿಯ ನಡುವಿನ ಸಂಘರ್ಷಗಳು ಅನೇಕ ಮಹಾಕಾವ್ಯಗಳು ಮತ್ತು ಕಲಾ ಪ್ರಕಾರಗಳ ಮೂಲ ಆಶಯಗಳಾಗಿವೆ. ಕಲೆಯ ಉದ್ದೇಶ ಯಾವುದಾದರೂ ಒಂದು ಬದಿಯ ಪರವಾಗಿ ನಿಲ್ಲುವುದಲ್ಲ. ವಿಭಿನ್ನ ಹಾಗೂ ವಿರುದ್ಧ ತತ್ವಗಳನ್ನು ಮುಖಾಮುಖಿಯಾಗಿಸುವ ಮೂಲಕ ಹೊಸ ದೃಷ್ಟಿಕೋನ ಮತ್ತು ವಿವೇಕವನ್ನು ಮೂಡಿಸುವುದಾಗಿದೆ ಎಂದರು. ಡಾ| ಎಚ್.ಎಸ್ ವೆಂಕಟೇಶ ಮೂರ್ತಿ ರಚಿಸಿರುವ ‘ಊರ್ಮಿಳಾ’ ಏಕವ್ಯಕ್ತಿ ರಂಗಪ್ರಯೋಗವನ್ನು ಡಾ| ಶ್ರೀಪಾದ ಭಟ್ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದು, ಅಯನಳ ಪಾಲಕರಾದ ಕೆ.ವಿ ರಮಣ್ ಹಾಗೂ ಡಾ. ಮುಕಾಂಬಿಕಾ ಸಹಕರಿಸಿದರು.




ರಂಗಪ್ರಯೋಗದ ಬಳಿಕ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ನಾಟಕದ ಆಶಯ, ಪಾತ್ರಗಳ ನಿರ್ವಹಣೆ ಹಾಗೂ ಅಭಿನಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರು. ಡಾ| ಶ್ರೀಪಾದ ಭಟ್ ಹಾಗೂ ಆಳ್ವಾಸ್ ಬಿಎಡ್ ಕಾಲೇಜಿನ ವಿದ್ಯಾರ್ಥಿನಿ ವಿದುಷಿ ಅಯನಾ ವಿ ರಮಣ್ರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಆಳ್ವಾಸ್ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ| ಶಂಕರಮೂರ್ತಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿವಿಧ ಘಟಕಗಳ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.















































































































