


ಶ್ರೀಯುತ ಕುಶಲ ಹೆಗ್ಡೆಯವರ ಜನ್ಮಶತಮಾನೋತ್ಸವದ ಅಂಗವಾಗಿ ಜನಸೇವಾ ಟ್ರಸ್ಟ್ (ರಿ.) ಗಿಳಿಯಾರು ಒಂದು ಹಸಿರು ಸಂಕಲ್ಪ ಕೈಗೊಂಡಿದೆ. ಈ ವಿಶ್ವ ಪರಿಸರ ದಿನದ ಶುಭ ಸಂದರ್ಭದಲ್ಲಿ ಗಿಳಿಯಾರು ಗ್ರಾಮದ ಪ್ರತೀ ಮನೆಗೂ ‘ಕುಶಲಫಲತರು’ ವಿತರಿಸುವ ಪವಿತ್ರ ಕಾರ್ಯಕ್ಕೆ ಮುಂದಾಗಿದ್ದಾರೆ. ಗಿಳಿಯಾರು ಎಂಬ ಹೆಸರಿಗೆ ಗೌರವ ತಂದುಕೊಟ್ಟ ಮಹಾನ್ ಚೇತನ ಗಿಳಿಯಾರು ಮೈನಾಡಿ ಮನೆಯ ಕುಶಲ ಹೆಗ್ಡೆ ತಮ್ಮ ಅಪಾರ ಸಂಪರ್ಕ ಶಕ್ತಿಯಿಂದ ಗಿಳಿಯಾರು ಹೊಳೆಗೆ ಸೇತುವೆ ನಿರ್ಮಾಣಕ್ಕೆ ಅನುದಾನ ತಂದುಕೊಟ್ಟು, ಊರಿನ ಸಂಪರ್ಕ ಕಲ್ಪಿಸಿದ ದಾರ್ಶನಿಕ.
ಇಂದು ಗಿಳಿಯಾರಿನ ಪ್ರತೀ ಮನೆಯಲ್ಲೂ ಅವರ ಹೆಸರು ಶಾಶ್ವತವಾಗಿ ಉಳಿಯಲಿ, ಅವರ ಆದರ್ಶ ನಮ್ಮ ಅಂಗಳದಲ್ಲಿ ಫಲ ನೀಡಲಿ ಎಂಬ ಸದಾಶಯದಿಂದ ಈ ‘ಕುಶಲಫಲತರು’ ಯೋಜನೆಯನ್ನು ಆಯೋಜಿಸಿದ್ದೇವೆ. ‘ಒಂದು ಮರ, ನೂರು ನೆನಪು. ಒಂದು ಮರ, ಕುಶಲ ಹೆಗ್ಡೆಯವರಿಗೆ ಕೃತಜ್ಞತೆ’ ಸಲ್ಲಿಸಲಿದ್ದೇವೆ. ವಿತರಣೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಜನಸೇವಾ ಟ್ರಸ್ಟ್ (ರಿ.), ಗಿಳಿಯಾರು ಇದರ ಪ್ರವರ್ತಕರಾದ ವಸಂತ್ ಗಿಳಿಯಾರ್ ತಿಳಿಸಿದ್ದಾರೆ.





























































































































