ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ವತಿಯಿಂದ ಗುರು ಪೂರ್ಣಿಮೆಯ ಆಚರಣೆಯು ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರ ಶುಭ ಆಶೀರ್ವಾದದೊಂದಿಗೆ ಜುಲೈ 21 ರ ಆದಿತ್ಯವಾರದಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ – ವೀಣಾ ಪಿ. ಶೆಟ್ಟಿ ದಂಪತಿ ಪ್ರಾಯೋಜಕತ್ವದಲ್ಲಿ ಪುಣೆಯ ಔಂದ್ ನಲ್ಲಿಯ ರೋಹನ್ ನಿಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಗುರು ಪೂರ್ಣಿಮೆಯ ಅಂಗವಾಗಿ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರ, ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಗುರುಪೂಜೆ ಮಹಾಮಂಗಳಾರತಿ ನೆರವೇರಿತು. ಪ್ರಭಾಕರ್ ಶೆಟ್ಟಿ ದಂಪತಿ, ಪೃಥ್ವೀಶ್ ಶೆಟ್ಟಿ, ಸ್ನೇಹಲ್ ಶೆಟ್ಟಿ ದಂಪತಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ ದಂಪತಿ, ಬಳಗದ ಸದಸ್ಯರು, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯರು ಆರತಿ ಬೆಳಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಮ್ಮ ಸನಾತನ ಧರ್ಮ ಸಂಸ್ಕೃತಿಯಲ್ಲಿ ಗುರುವಿಗೆ ಮೊದಲ ಸ್ಥಾನ. ನಮ್ಮ ಜನ್ಮ ಪಡೆದಾಗ ಪ್ರಪ್ರಥಮವಾಗಿ ತಾಯಿಯೇ ಮೊದಲ ಗುರು. ನಂತರ ಪ್ರಾಥಮಿಕ, ಪ್ರೌಢ ಪ್ರಾಯದಲ್ಲಿ ವಿದ್ಯೆಯ ಮತ್ತು ಜ್ಞಾನ ಎರೆಯುವಲ್ಲಿ ಗುರುಗಳ ಮಾತು ಆಧ್ಯಾತ್ಮಿಕ ಗುರುವಿನಿಂದ ಲೋಕ ಜ್ಞಾನವನ್ನು ಪಡೆಯುತ್ತೇವೆ. ಪುರಾತನ ಕಾಲದಿಂದಲೂ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಗುರುವಿನ ಪ್ರೇರಣೆಯಂತೆ ಶಿಷ್ಯರಿಂದ ಬಹಳಷ್ಟು ಲೋಕ ಕಲ್ಯಾಣ ಕಾರ್ಯಗಳು ನಡೆದಿವೆ. ನಿತ್ಯ ಗುರುಸ್ಮರಣೆ ಮಾಡುವುದು ಉತ್ತಮ. ಆದರೆ ಇಂದಿನ ಗುರು ಪೂರ್ಣಿಮೆಯ ದಿನ ಬಹಳ ವಿಶೇಷವಾದುದು. ಈ ದಿನ ಗುರು ಸೂತ್ರದ ಪ್ರಭಾವ ಬಹಳಷ್ಟು ಇರುತ್ತದೆ. ಗುರು ನಮನವನ್ನು ಪೂಜ್ಯನೀಯವಾಗಿ ಮಾಡಿದರೆ ನಮ್ಮ ಜೀವನದಲ್ಲಿ ಒಳಿತು ಆಗುತ್ತದೆ. ಒಡಿಯೂರು ಶ್ರೀಗಳ ಶುಭ ಆಶೀರ್ವಾದದೊಂದಿಗೆ ನಾವು ಗುರು ಪೂರ್ಣಿಮೆಯ ಆಚರಣೆಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದೇವೆ. ಜೀವನದ ನಿಜವಾದ ಮಾರ್ಗವನ್ನು ಸನ್ಮಾರ್ಗವನ್ನು ನಮಗೆ ತೋರಿಸುವ ಗುರು ದೇವರಿಗೆ ಸಮ್ಮಾನ, ಅಜ್ಞಾನವನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ನೀಡಿ ಜೀವನ ಮಾರ್ಗವನ್ನು ತೋರಿಸುವ ಗುರುವಿಗೆ ನಮ್ಮ ನಮನವನ್ನು ಸಲ್ಲಿಸುತ್ತೇವೆ ಎಂದರು.
ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಗುರು ಇದ್ದೆ ಇರುತ್ತಾರೆ. ನಮ್ಮ ಜೀವನದ ಸಾರ್ಥಕತೆಗೆ ಉತ್ತಮ ಸಂಸ್ಕಾರ, ಸತ್ಯ ಧರ್ಮ, ಶಾಂತಿ ಸ್ನೇಹಮಯ ಜೀವನ ಸಾಧ್ಯವಾಗಬೇಕಾದರೆ ಗುರು ಆಜ್ಞೆ, ಪ್ರೇರಣೆಯಂತೆ ನಡೆಯುವುದು ನಮ್ಮ ಕರ್ತವ್ಯ. ನಮ್ಮ ಬಳಗದ ಮೂಲಕ ಗುರುಪೂರ್ಣಿಮೆ ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದೇವೆ. ಎಲ್ಲರಿಗೂ ಗುರು ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುಣೆ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಗುರುದೇವ ಬಳಗದ ಭಜನಾ ಮಂಡಳಿಯ ಸದಸ್ಯರನ್ನು ಪ್ರಭಾಕರ್ ಶೆಟ್ಟಿ ದಂಪತಿ ಫಲಪುಷ್ಪ ನೀಡಿ ಗೌರವಿಸಿದರು. ಬಳಗದ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಗುರು ಪೂರ್ಣಿಮೆಯ ವಿಶೇಷತೆಯ ಬಗ್ಗೆ ಮತ್ತು ಆಚರಣೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಬಳಗದ ಪ್ರಮುಖರಾದ ಉಷಾಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ರಂಜಿತ್ ಶೆಟ್ಟಿ, ಸುರೇಶ್ ಶೆಟ್ಟಿ, ಸದಾಶಿವ ಶೆಟ್ಟಿ, ಸದಾನಂದ ಶೆಟ್ಟಿ, ವಿದ್ಯಾನಂದ ಶೆಟ್ಟಿ, ನಿಖಿಲ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಶ್ರೀವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಶೋಭಾ ಯು. ಶೆಟ್ಟಿ, ಪ್ರೇಮಾ ಎಸ್. ಶೆಟ್ಟಿ, ಪುಷ್ಪಾ ಪೂಜಾರಿ, ಮಮತಾ ಡಿ. ಶೆಟ್ಟಿ, ಅಮಿತಾ ಪಿ. ಪೂಜಾರಿ, ಸಂಧ್ಯಾ ಶೆಟ್ಟಿ, ವೀಣಾ ಡಿ. ಶೆಟ್ಟಿ, ಉಮಾ ಶೆಟ್ಟಿ, ರಕ್ಷಾ ಶೆಟ್ಟಿ ಹಾಗೂ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ಗುರು ಭಕ್ತರು ಉಪಸ್ಥಿತರಿದ್ದು, ಗುರು ಕೃಪೆಗೆ ಪಾತ್ರರಾದರು. ಮಂಗಳಾರತಿ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.