ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ಪ್ರತಿ ವರ್ಷದಂತೆ ಜಿಲ್ಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈಜು ಮತ್ತು ಲಾನ್ ಟೆನಿಸ್ ನಲ್ಲಿ ಬೇಸಗೆ ತರಬೇತಿ ಶಿಬಿರವನ್ನು ಎಪ್ರಿಲ್ 1 ರಿಂದ ಮೇ 31ರವರೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಉದ್ಘಾಟಿಸಿ ಮಕ್ಕಳು ತಮ್ಮ ರಜಾ ದಿನಗಳನ್ನು ಇಂತಹ ಶಿಬಿರದಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯವಾದ ಸಮಯವನ್ನು ಸದುಪಯೋಗಗೊಳಿಸಬೇಕು. ಕ್ರೀಡೆಯು ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮವನ್ನು ಕಲಿಸುವುದಲ್ಲದೇ ಅವರ ಜೀವನದ ಯಶಸ್ಸಿಗೂ ಕೂಡ ಕಾರಣವಾಗುತ್ತದೆ ಎಂದರು.
ಮುಖ್ಯ ಅತಿಥಿ ಆರೂರು ಶ್ರೀ ವಿಷ್ಣುಮೂರ್ತಿ ಪ್ಯೂಯೆಲ್ಸ್ ಮತ್ತು ಸರ್ವಿಸಸ್ ನ ಮೂಲಕ ಶ್ರೀಧರ್ ವಿ. ಶೆಟ್ಟಿ ಶುಭ ಕೋರಿದರು. ಕ್ಲಬ್ ನ ಅಧ್ಯಕ್ಷ ಎ. ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಂ. ಚಂದ್ರಶೇಖರ್ ಹೆಗ್ಡೆ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ವಿಕ್ರಂ ಪ್ರಭು ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯದರ್ಶಿ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ವಂದಿಸಿದರು. ಪದಾಧಿಕಾರಿಗಳು, ಕಾರ್ಯಾಕಾರಿ ಸಮಿತಿಯ ಸದಸ್ಯರು, ಪೋಷಕರು ಮತ್ತು ಶಿಬಿರಾರ್ಥಿಗಳು ಹಾಜರಿದ್ದರು. ಸುಮಾರು 200 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.