ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರ ಬೇಬಿ ಫ್ರೆಂಡ್ ಕ್ಲಿನಿಕ್ ಮತ್ತು ಬಂಟ್ಸ್ ಅಸೋಸಿಯೇಷನ್ ಪುಣೆ ಸಂಯುಕ್ತ ಆಯೋಜನೆಯಲ್ಲಿ ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಬಿಡುಗಡೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವು ಏಪ್ರಿಲ್ 2 ರಂದು ಪುಣೆಯ ಕ್ಯಾಂಪ್ ಎಂ. ಜಿ. ರೋಡ್ ನಲ್ಲಿರುವ ಡಾ. ಸುಧಾಕರ್ ಶೆಟ್ಟಿಯವರ ಬೇಬಿ ಫ್ರೆಂಡ್ ಕ್ಲಿನಿಕ್ ನ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಬಾಳಿಕೆ ಕುರ್ಕಿಲ್ ಬೆಟ್ಟು ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷ ಗಣೇಶ್ ಹೆಗ್ಡೆ ಪುಂಚೂರು, ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪಿಂಪ್ರಿ-ಚಿಂಚ್ವಾಡ್ ತುಳು ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲು, ಪುಣೆ ಬಂಟ್ಸ್ ಅಸೋಸಿಯೇಷನ್ ನ ಯುವ ವಿಭಾಗದ ಅಧ್ಯಕ್ಷ ನ್ಯಾಯವಾದಿ ರೋಶನ್ ಶೆಟ್ಟಿ ಮತ್ತು ಸಂಘದ ವೈದ್ಯಕೀಯ ವಿಭಾಗದ ಕಾರ್ಯಧ್ಯಕ್ಷರು, ಸಂಘದ ಸದಸ್ಯರು ಹಾಗೂ ಡಾ. ಸುಧಾಕರ್ ಶೆಟ್ಟಿಯವರ ಆಪ್ತರು ಭಾಗಿಯಾಗಿ ಈ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.
ಬೇಬಿ ಫ್ರೆಂಡ್ ಕ್ಲಿನಿಕ್ ನ ಮೂಲಕ ಡಾ. ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪುಣೆಯ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಕಾರ್ಖಾನೆ, ಕಚೇರಿಗಳು ಮತ್ತು ಗೃಹ ಸೇವಕಿಯರು, ಚಾಲಕರು ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬಂದಿಯ ಮಕ್ಕಳ ಅನುಕೂಲಕ್ಕಾಗಿ ಪುಣೆ ನಗರದಲ್ಲಿ ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಅನ್ನು ಪ್ರಾರಂಭಿಸಲಾಗಿದೆ.
ಉಚಿತ ಕಾರ್ಡ್ ನಲ್ಲಿ ಇರುವ ವಿವಿಧ ಸೌಲಭ್ಯಗಳು :
ಸಿಬ್ಬಂದಿಯ ಮಕ್ಕಳಿಗೆ ಅಂದರೆ ಜನನದಿಂದ 12 ವರ್ಷದವರೆಗೆ ಉಚಿತ ತಪಾಸಣೆ ಮತ್ತು ಇನ್ನಿತರ ವೈದ್ಯಕೀಯ ಸವಲತ್ತುಗಳನ್ನು ನೀಡುವ ವಿಶೇಷತೆಯನ್ನು ಈ ಕಾರ್ಡ್ ಹೊಂದಿದೆ. ಪುಣೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮೇಲ್ಕಾಣಿಸಿದ ಸಂಸ್ಥೆಗಳ ಸಿಬ್ಬಂದಿಯ ಮಕ್ಕಳಿಗೆ ಸಿಗುವ ಸೌಲಭ್ಯಗಳಲ್ಲಿ ವೈದ್ಯರೊಂದಿಗೆ ಉಚಿತ ಸಮಾಲೋಚನೆ, ಸರಕಾರ ಅನುಮೋದಿತ ಉಚಿತ ಲಸಿಕೆ, ಕಡಿಮೆ ದರದಲ್ಲಿ ಮಕ್ಕಳ ಎಲ್ಲಾ ಹೊಸ ಲಸಿಕೆಗಳ ವಿತರಣೆ, ಮಕ್ಕಳ ಸಹಾಯವಾಣಿ, ವಿಶೇಷ ಅಗತ್ಯಗಳು ಮತ್ತು ಹಿಂದುಳಿದಿರುವ ಮಕ್ಕಳಿಗಾಗಿ ಉಚಿತ ಮಾರ್ಗದರ್ಶನ ನೀಡಲಾಗುವುದು. ಈ ಹೆಲ್ತ್ ಕಾರ್ಡ್ 3 ವರ್ಷಗಳ ಕಾಲ ಮಾನ್ಯತೆ ಹೊಂದಿರಲಿದೆ.