ಕೆಲವೊಂದು ಸಂದರ್ಭದಲ್ಲಿ ಅಸೌಖ್ಯದಲ್ಲಿರುವ ರೋಗಿಗೆ ಸರಿಯಾದ ಗುಂಪಿನ ರಕ್ತ ಸಿಗುವುದಿಲ್ಲ. ಆ ಸಂದರ್ಭ ರಕ್ತದಾನ ಶಿಬಿರಗಳಲ್ಲಿ ಪಡೆದ ರಕ್ತವನ್ನು ಶೇಖರಿಸಿ ರೋಗಿಗಳಿಗೆ ನೀಡಲಾಗುತ್ತದೆ. ಇದರಿಂದ ರೋಗಿಯ ಜೀವ ಉಳಿಯುತ್ತದೆ. ಆದ್ದರಿಂದ ಇನ್ನೊಬ್ಬರ ಜೀವ ಉಳಿಸುವ ರಕ್ತದಾನ ಮಹಾದಾನ ಎಂದು ಮುಲುಂಡ್ ಬಂಟ್ಸ್ ನ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ ಅವರು ನುಡಿದರು. ಮುಲುಂಡ್ ಬಂಟ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿಯವರ ಮಾರ್ಗದರ್ಶನದೊಂದಿಗೆ ಯುವ ವಿಭಾಗದ ಕಾರ್ಯಾಧ್ಯಕ್ಷ ಕ್ಷಿತಿಜ್ ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಪ್ರಭಾ ಕೆ ಶೆಟ್ಟಿ ಮತ್ತು ಪದಾಧಿಕಾರಿಗಳ ಸಹಯೋಗದೊಂದಿಗೆ ಹಾಗೂ ಡಾಕ್ಟರ್ಸ್ ಎಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ನುರಿತ ವೈದ್ಯರ ತಂಡದ ಸಹಯೋಗದೊಂದಿಗೆ ರಕ್ತದಾನ ಶಿಬಿರವು ನವೆಂಬರ್ 22ರಂದು ರವಿವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3ರವರೆಗೆ ಮುಲುಂಡ್ ಬಂಟ್ಸ್ ನ ಕಚೇರಿಯಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾಕ್ಟರ್ಸ್ ಎಸೋಸಿಯೇಷನ್ ನ ಸಂಚಾಲಕ ಡಾ. ಸದಾನಂದ ಆರ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಮೂರು ತಿಂಗಳಿಗೊಮ್ಮೆ ಶರೀರವನ್ನು ಚೆಕ್ ಅಪ್ ಮಾಡಿಸಬೇಕು. ಇದರಿಂದ ಮನುಷ್ಯನ ದೇಹದಲ್ಲಿರುವ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್ ಎಲ್ಲಾ ತಿಳಿಯುತ್ತದೆ. ಅಧಿಕಾಂಶ ಇದ್ದಲ್ಲಿ ಸೂಕ್ತ ಚಿಕಿತ್ಸೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದರು.




ಕಾರ್ಯಕ್ರಮದಲ್ಲಿ ಮುಲುಂಡ್ ಬಂಟ್ಸ್ ನ ಸದಸ್ಯರೆಲ್ಲರೂ ಆಗಮಿಸಿ ಸುಮಾರು 100 ಮಂದಿ ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಆರಂಭದಲ್ಲಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಮುಲುಂಡ್ ಬಂಟ್ಸ್ ನ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಶೆಟ್ಟಿ, ಕೋಶಾಧಿಕಾರಿ ಸಿಎ ಗಣೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಉದಯ ಶೆಟ್ಟಿ, ಜೊತೆ ಕಾರ್ಯದರ್ಶಿ ಅಲೋಕ್ ಶೆಟ್ಟಿ ಮತ್ತು ಶೋನಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಪ್ರಭಾ ಕೆ ಶೆಟ್ಟಿ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಕಾರ್ಯಾಧ್ಯಕ್ಷ ಕ್ಷಿತಿಜ್ ಶೆಟ್ಟಿ ಮತ್ತು ಪದಾಧಿಕಾರಿಗಳು, ವಿಶ್ವಸ್ಥರು, ಮಾಜಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಡಾಕ್ಟರ್ಸ್ ಎಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ, ಸಂಚಾಲಕ ಡಾ. ಸದಾನಂದ ಶೆಟ್ಟಿ, ಉಪಾಧ್ಯಕ್ಷ ಡಾ. ರಂಜನ್ ಶೇಣವ, ಡಾ. ಅಜಿತ್ ಶೆಟ್ಟಿ, ಡಾ. ಶ್ರವಣ್ ಶೆಟ್ಟಿ, ಡಾ. ತುಷಾರ್ ಹೆಗ್ಡೆ, ಡಾ. ಪ್ರಥ್ವಿ ಶೆಟ್ಟಿ, ಡಾ. ಸ್ವರೂಪ್ ಹೆಗ್ಡೆ ಮತ್ತು ವಿನಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಗುರುದತ್ ಪೂಂಜಾ ಮುಂಡ್ಕೂರು


















































































































