‘ಮಾನವನ ಸೇವೆಯೇ ಮಾಧವನ ಸೇವೆ’ ಎಂಬ ಧೈಯ ವಾಕ್ಯವನ್ನು ಆದರ್ಶವಾಗಿರಿಸಿಕೊಂಡ ನಮ್ಮ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ಕಿನ್ನಿಗೋಳಿ ದ.ಕ ಕಳೆದ 14 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸೇವಾ ಕ್ಷೇತ್ರಗಳಲ್ಲಿ ವೈವಿಧ್ಯಮಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ. ಕಿನ್ನಿಗೋಳಿ ಮೂಡುಬಿದಿರೆ ಮತ್ತು ಸುತ್ತಮುತ್ತಲ ಅನೇಕ ಹಳ್ಳಿಗಳಲ್ಲಿ ನಾವು ಹಮ್ಮಿಕೊಂಡ ಉಚಿತ ವೈದ್ಯಕೀಯ ಶಿಬಿರಗಳು, ದಂತ ತಪಾಸಣಾ ಶಿಬಿರಗಳು, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳು, ತೆಂಗಿನ ಸಸಿ ವಿತರಣಾ ಶಿಬಿರಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು ಜನ ಪ್ರೀತಿಯನ್ನೂ ಜನಮನ್ನಣೆಯನ್ನೂ ಗಳಿಸಿದ್ದು, ಸಾವಿರಾರು ಮಂದಿ ಇದರ ಸದುಪಯೋಗವನ್ನು ಪಡೆದಿದ್ದಾರೆ. ಇದೀಗ ದುರ್ದೈವವಶಾತ್ ಕೈಕಾಲುಗಳನ್ನು ಕಳೆದುಕೊಂಡ ಅಂಗವಿಕಲರಾದವರನ್ನು ಗಮನದಲ್ಲಿಟ್ಟುಕೊಂಡು ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಗನ್ನಾಥ ಶೆಟ್ಡಿ ನಿಡ್ಡೋಡಿ ಚಾವಡಿಮನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.




ಡಿಸೆಂಬರ್ 14 ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಈ ಶಿಬಿರವನ್ನು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆಯೋಚಿಸಲಾಗಿದೆ ಎಂದವರು ತಿಳಿಸಿದರು. ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ), ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್ (ರಿ), ಮಹಾವೀರ ಲಿಂಗ್ ಸೆಂಟರ್ ಹುಬ್ಬಳ್ಳಿ ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ದುರಾದೃಷ್ಟವಶಾತ್ ಕೈಕಾಲುಗಳನ್ನು ಕಳೆದುಕೊಂಡ ಬಂಧುಗಳು ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆಮಾಡಿ ತಮ್ಮ ಹೆಸರುಗಳನ್ನು ಡಿಸೆಂಬರ್ 10 ರ ಒಳಗೆ ನೊಂದಣಿ ಮಾಡಲು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿಯವರು ಕೋರಿರುತ್ತಾರೆ. ಮೊಬೈಲ್ ಸಂಖ್ಯೆ 9448463233, 9844950698. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಸುಚೇತ ಜೆ ಶೆಟ್ಟಿ, ನರೇಂದ್ರ ಕೆರೆಕಾಡು, ನರಸಿಂಹ ಮಡಿವಾಳ, ಶಶಿಧರ್ ಉಪಸ್ಥಿತರಿದ್ದರು.


















































































































