ಭಾರತೀಯ ಮೂಲದ ಹಿರಿಯ ಕೃಷಿ ವ್ಯಾಪಾರ ಕಾರ್ಯನಿರ್ವಾಹಕರಾದ ಗಂಗಾಧರ ಶೆಟ್ಟಿ ಅವರು ನೈಜೀರಿಯಾದ ಪ್ರಮುಖ ತಾಳೆ ಎಣ್ಣೆ (Palm Oil) ಉತ್ಪಾದಕ ಕಂಪನಿಯಾದ ‘ಪ್ರೆಸ್ಕೊ ಪಿಎಲ್ಸಿ’ (Presco Plc) ಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಕಂಪನಿಯ ನಿರ್ದೇಶಕ ಮಂಡಳಿಯು ಈ ಮಹತ್ವದ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದ್ದು, ಗಂಗಾಧರ ಶೆಟ್ಟಿ ಅವರು ಜನವರಿ 1, 2027 ರಿಂದ ನೂತನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರಾಗಿರುವ ರೆಜಿ ಜಾರ್ಜ್ (Reji George) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ಗಂಗಾಧರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಪಶ್ಚಿಮ ಆಫ್ರಿಕಾ ಮತ್ತು ಏಷ್ಯಾದ ಕೃಷಿ-ವ್ಯಾಪಾರ, ಜಾಗತಿಕ ವಾಣಿಜ್ಯ ಮತ್ತು ಕೈಗಾರಿಕಾ ಕಾರ್ಯಾಚರಣೆ ಕ್ಷೇತ್ರದಲ್ಲಿ ಗಂಗಾಧರ ಶೆಟ್ಟಿ ಅವರಿಗೆ 29 ವರ್ಷಗಳಿಗೂ ಹೆಚ್ಚಿನ ಅನುಭವವಿದೆ. ಈ ನೇಮಕಾತಿಗೂ ಮುನ್ನ ಅವರು ಪ್ರೆಸ್ಕೊ ಕಂಪನಿಯ ಅಂಗ ಸಂಸ್ಥೆಯಾದ ‘ಘಾನಾ ಆಯಿಲ್ ಪಾಮ್ ಡೆವಲಪ್ಮೆಂಟ್ ಕಂಪನಿ’ಯ (GOPDC) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ (CEO) ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಘಾನಾದಲ್ಲಿ 4,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಸಂಸ್ಥೆಯನ್ನು ಮುನ್ನಡೆಸಿದ ಕೀರ್ತಿ ಇವರಿಗಿದೆ.




ಗಂಗಾಧರ ಶೆಟ್ಟಿಯವರು ಬ್ರಹ್ಮಾವರ ಕುಂಜಾಲಿನ ಆರ್.ಕೆ ಪಾಟ್ಕರ್ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಿವಂಗತ ಆರೂರು ವೆಂಕಪ್ಪ ಶೆಟ್ಟಿ ಹಾಗೂ ದಿವಂಗತ ಪಾಪುಜೆ ಶಕುಂತಲಾ ವೆಂಕಪ್ಪ ಶೆಟ್ಟಿ ದಂಪತಿಯ ನಾಲ್ಕು ಮಕ್ಕಳಲ್ಲಿ ಮೂರನೇ ಪುತ್ರರಾಗಿದ್ದಾರೆ. ಮಾರ್ಕೆಟಿಂಗ್ ವಿಷಯದಲ್ಲಿ ಎಂಬಿಎ (MBA) ಪದವಿ ಪಡೆದಿದ್ದು, ನೈಜೀರಿಯಾದ ಪ್ರತಿಷ್ಠಿತ ಲಾಗೋಸ್ ಬಿಸಿನೆಸ್ ಸ್ಕೂಲ್ನಲ್ಲಿ (Lagos Business School) ಉನ್ನತ ಕಾರ್ಯ ನಿರ್ವಾಹಕ ತರಬೇತಿಯನ್ನೂ ಪೂರ್ಣಗೊಳಿಸಿದ್ದಾರೆ. ತಾಳೆ ಎಣ್ಣೆ ಉತ್ಪಾದನೆ, ಸಂಸ್ಕರಣೆ ಮತ್ತು ವಿಸ್ತರಣೆಯಲ್ಲಿ ಗಂಗಾಧರ ಶೆಟ್ಟಿಯವರ ಆಳವಾದ ಜ್ಞಾನವು ‘ಪ್ರೆಸ್ಕೊ ಪಿಎಲ್ಸಿ’ ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಕಂಪನಿಯ ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕಂಪನಿಯೊಂದರ ಉನ್ನತ ಹುದ್ದೆಗೆ ಭಾರತೀಯ ಮೂಲದ ಬಂಟ ಸಮಾಜದ ‘ಅನರ್ಘ್ಯ ರತ್ನ’ ಗಂಗಾಧರ ಶೆಟ್ಟಿ ಅವರು ನೇಮಕವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.


















































































































