ಸಮಾಜದ ಎಲ್ಲಾ ಸಮುದಾಯದ ಜನರನ್ನು ಜಾತಿ, ಮತ, ಧರ್ಮ ಭೇದವಿಲ್ಲದೇ ಮಾಧ್ಯಮದ ಮೂಲಕ ಒಟ್ಟು ಸೇರಿಸಿ ಕಳೆದ 14 ವರ್ಷಗಳಿಂದ ಎಂ.ಪಿ.ಎಂ.ಎಲ್.ಎ ನ್ಯೂಸ್ ಪತ್ರಿಕೆ ಮತ್ತು ವೆಬ್ ಜಾಲದ ಮೂಲಕ ಸೌಹಾರ್ದ ಸಂಗಮವನ್ನು ಅಶೋಕ್ ಶೆಟ್ಟಿ ಬಿ.ಎನ್ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಹೇಳಿದರು. ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಎಂ.ಪಿ.ಎಂ.ಎಲ್.ಎ ಪತ್ರಿಕೆ ಮತ್ತು ನ್ಯೂಸ್ ವೆಬ್ ಮೀಡಿಯಾ ವತಿಯಿಂದ ಹಮ್ಮಿಕೊಂಡ 14 ವರ್ಷದ ಸೌಹಾರ್ದ ಸಂಗಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.




ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಮಾತನಾಡುತ್ತಾ, ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಸಮಾಜದಲ್ಲಿ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಇರಬೇಕೆಂಬ ಮಾತಿನಂತೆ ನಡೆದು ಬಂದ ಸಮಾಜ ಸೇವಕರನ್ನು ಗುರುತಿಸಿರುವ ಅಶೋಕ್ ಶೆಟ್ಟಿಯವರ ಪ್ರಯತ್ನ ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆರ್.ಬಿ.ಐ ಉತ್ತರ ವಲಯದ ಮಾಜಿ ನಿರ್ದೇಶಕ, ಸಹಕಾರ ರತ್ನ ಡಾ| ಅಗರಿ ನವೀನ್ ಭಂಡಾರಿ ಮಾತನಾಡುತ್ತಾ, ಕಳೆದ ಹಲವು ವರ್ಷಗಳಲ್ಲಿ ನಡೆಸಿಕೊಂಡು ಬಂದ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದರು. ಮಂಗಳೂರಿನ ಹಿರಿಯ ನ್ಯಾಯಾವಾದಿ ಕೆ ದಯಾನಂದ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ 30 ಕೋಟಿ ರೂಪಾಯಿಕ್ಕೂ ಅಧಿಕ ಹಣವನ್ನು ವಿತರಿಸಿ ಸೇವಾ ಕಾರ್ಯ ನಡೆಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರಿಗೆ ಸಮಾಜ ರತ್ನ ಪುರಸ್ಕಾರವನ್ಮು ಅವರ ಧರ್ಮಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿಯವರೊಂದಿಗೆ ನೀಡಿ ಸನ್ಮಾನಿಸಲಾಯಿತು.

ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿಯವರು ಬೆಸ್ಟ್ ಆಫೀಸರ್ಸ್ ಅವಾರ್ಡ್ ಸ್ವೀಕರಿಸಿ ಮಾತನಾಡುತ್ತಾ, ಸರಕಾರಿ ಅಧಿಕಾರಿಯಾಗಿ ತಾನು ಮಾಡಿರುವ ಕೆಲಸಕ್ಕೆ ಉತ್ತಮ ಅಧಿಕಾರಿ ಎಂದು ಗುರುತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ ನ್ಯಾಯವಾದಿ ರಾಮಪ್ರಸಾದ್ ಆರ್, ವೈದ್ಯರತ್ನ ಗಂಗಾಧರ ಪಂಡಿತ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಸುರೇಶ್ ಎಲ್ ಶೆಟ್ಟಿ ಶಿಬರೂರು ಶುಭ ಹಾರೈಸಿದರು. ಆಕಾಶವಾಣಿ ಕಲಾವಿದೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಸ್ವಾಗತಿಸಿ, ಪ್ರಸ್ತಾವನೆಗೈದು ಧನ್ಯವಾದ ಸಮರ್ಪಿಸಿದರು. ರವೀಂದ್ರ ಪ್ರಭು ಅವರ ರಾಗ್ ರಂಗ್ ತಂಡದಿಂದ ಸೌಹಾರ್ದ ಸಂಗೀತ ರಸ ಸಂಜೆ ನಡೆಯಿತು. ದ.ಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನರೇಶ್ ಸಸಿಹಿತ್ಲು ರಚನೆ, ನಿರ್ದೇಶನದಲ್ಲಿ ತ್ರಿನೇತ್ರ ಕಲಾವಿದರಿಂದ ಬ್ರಹ್ಮ ರಕ್ಕಸೆ ತುಳು ನಾಟಕದ ಪ್ರದರ್ಶನ ನಡೆಯಿತು.


















































































































