ಬಂಟರ ಸಂಘ ಮುಂಬಯಿ ಹಿಂದಿನಿಂದಲೂ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದು, ಇದೀಗ ಸಂಘದ ಸಂಚಾಲಕತ್ವದಲ್ಲಿ ಮೂರು ಶಿಕ್ಷಣ ಸಂಸ್ಥೆಗಳು ಕಾರ್ಯಾಚರಣೆಯಲ್ಲಿದೆ. ಅಸಂಖ್ಯಾತ ವಿದ್ಯಾರ್ಥಿಗಳು ನಮ್ಮ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಜನೆಯನ್ನು ಮಾಡುತ್ತಿದ್ದಾರೆ. ಸಮಾಜ ಬಾಂಧವರ ಮಕ್ಕಳ ವಿದ್ಯಾರ್ಜನೆಗಾಗಿ ಮತ್ತು ಅಭಿವೃದ್ಧಿಗಾಗಿ ವರ್ಷಕ್ಕೆ ಸುಮಾರು 12 ಕೋಟಿ ರೂಪಾಯಿಗಳಷ್ಟು ನೀಡಲಾಗುತ್ತಿದೆ. ಇದು ಬಂಟರ ಸಂಘದ ಪ್ರಸಾದ ಎಂದು ಸ್ವೀಕರಿಸಬೇಕು. ಇಂದು ಇಲ್ಲಿ ಬಂಟರ ಸಂಘ ಮುಂಬಯಿ ವತಿಯಿಂದ ಬಂಟ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸುಮಾರು 55 ಲಕ್ಷ ರೂಪಾಯಿಗಳ ಮೊತ್ತವನ್ನು 120 ವಿದ್ಯಾರ್ಥಿಗಳಿಗೆ ವೃತ್ತಿಪರ ವಿದ್ಯಾರ್ಥಿವೇತನ ನಿಧಿ ಸಾಲ ರೂಪವಾಗಿ ವಿತರಿಸಲಾಗಿದೆ. ಈ ಮೊತ್ತವನ್ನು ಸುಮಾರು ಐದು ವರ್ಷದ ಒಳಗೆ ಅವರು ಸಂಘಕ್ಕೆ ಹಿಂತಿರುಗಿಸಬೇಕು. ಯಾರು ಜೀವನದಲ್ಲಿ ಹಾರ್ಡ್ ವರ್ಕ್ ಮಾಡುತ್ತಾರೆ ಅವರು ಸಮಾಜವನ್ನು ನೋಡುತ್ತಾರೆ ಎಂದು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಅಭಿಪ್ರಾಯಿಸಿದರು. ಅವರು ನವೆಂಬರ್ 20ರಂದು ಸಂಜೆ ಬಂಟರ ಭವನದ ಎನೆಕ್ಸ್ ಸಭಾಗೃಹದಲ್ಲಿ ನಡೆದ ಬಂಟ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸಂಘದಿಂದ ನೀಡಲ್ಪಟ್ಟ ವೃತ್ತಿಪರ ವಿದ್ಯಾರ್ಥಿವೇತನ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಂಟರ ಸಂಘದ ಮಾಜಿ ಅಧ್ಯಕ್ಷ ಹಿರಿಯ ನ್ಯಾಯವಾದಿ ಆರ್.ಸಿ ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ, ಜನ್ಮಭೂಮಿಯನ್ನು ತೊರೆದು ಕರ್ಮಭೂಮಿಯಲ್ಲಿ ಶ್ರಮಜೀವಿಗಳಾಗಿ ಬದುಕಿದ ಬಂಟರು ತಾವು ಅಭಿವೃದ್ಧಿಯಾಗುವುದರ ಜೊತೆಗೆ ಸ್ವಜಾತಿ ಬಾಂಧವರನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಮುಂದೆ ಬರಬೇಕಾದರೆ ಹಾರ್ಡ್ ವರ್ಕ್ ಮಾಡಬೇಕು. ಇದರೊಂದಿಗೆ ದೇವರ ಅನುಗ್ರಹ ಮತ್ತು ತಂದೆ ತಾಯಿಯ ಆಶೀರ್ವಾದದೊಂದಿಗೆ ಪ್ರಯತ್ನವೂ ಸೇರಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.







ಭವಾನಿ ಶಿಪ್ಪಿಂಗ್ ನ ಸಿಎಂಡಿ ಕುಸುಮೋಧರ ಡಿ ಶೆಟ್ಟಿ ಅವರು ಮಾತನಾಡಿ, ನಾವೆಲ್ಲಿದ್ದರೂ ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರವನ್ನು ಎಂದಿಗೂ ಮರೆಯಬಾರದು. ಗಾಳಿ ಬರದೆ ಮರದ ಎಲೆ ಅಲ್ಲಾಡುವುದಿಲ್ಲ. ನಾವು ಬಂಟರೆಂಬ ಹಿರಿಮೆಯನ್ನು ಎಂದಿಗೂ ಮರೆಯಬಾರದು. ಅದು ನಮಗೆ ಹೆಮ್ಮೆ. ಹಿಂದೆ ಬಂಟರ ಸಂಘದ ಅಧ್ಯಕ್ಷರಾಗಿದ್ದ ಭುಜಂಗ ಶೆಟ್ಟಿಯವರು, ಮೆರ್ಕಳ ತ್ಯಾoಪಣ್ಣ ಶೆಟ್ಟಿಯವರು ಇದೀಗ ಅಸಸ್ಥರಾಗಿದ್ದಾರೆ. ಅದರಲ್ಲೂ 94 ವರ್ಷದಂಚಿನಲ್ಲಿರುವ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್ ಸಿ ಶೆಟ್ಟಿಯವರು ಇಂದು ಇಲ್ಲಿಗೆ ಬಂದು ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ. ನಮ್ಮ ಸಮಾಜದ ಪಾಲಕರು ತಮ್ಮ ಮಕ್ಕಳಿಗೆ ಸ್ವಜಾತಿ ಬಾಂಧವರ ಮಕ್ಕಳೊಂದಿಗೆ ಮದುವೆಯನ್ನು ಮಾಡಿಸಬೇಕು. ಜನ್ಮ ನೀಡಿದ ತಂದೆ ತಾಯಿಯನ್ನು ಎಂದಿಗೂ ಮರೆಯಬಾರದು. ಅವರನ್ನು ದುಃಖಿಸಿದರೆ ದೇವರನ್ನು ದುಃಖಿಸಿದ ಹಾಗೆ ಎಂದು ನಾವು ತಿಳಿಯಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ರಿಜೆನ್ಸಿ ಗ್ರೂಪ್ ಆಫ್ ಹೋಟೆಲ್ಸ್ ನ ನಿರ್ದೇಶಕಿ ಹಾಗೂ ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆ ಲತಾ ಜಯರಾಮ್ ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ, ಜೀವನದಲ್ಲಿ ಯಾರು ಕಷ್ಟ ಅನುಭವಿಸುತ್ತಾರೋ ಅವರು ಶೈನ್ ಆಗುತ್ತಾರೆ. ಬಂಟ ಸಮಾಜ ಬಾಂಧವರ ಮಕ್ಕಳಿಗೆ ಕಲಿಯಲು ಬಂಟರ ಸಂಘ ಯಾವಾಗಲೂ ಸಪೋರ್ಟ್ ಮಾಡುತ್ತದೆ. ಕಲಿಯುವ ಮಕ್ಕಳು ಚೆನ್ನಾಗಿ ಕಲಿತು ತಂದೆ ತಾಯಿಯರನ್ನು ನೋಡಿಕೊಳ್ಳಬೇಕು. ದೈವ ದೇವರ ಅನುಗ್ರಹ ನಿಮಗೆ ಎಂದೆಂದಿಗೂ ಇರುತ್ತದೆ. ದೇವರು ಎಲ್ಲರನ್ನೂ ಒಳ್ಳೆಯದು ಮಾಡಲಿ ಎಂದರು. ವೇದಿಕೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ನ್ಯಾಯವಾದಿ ಆರ್.ಸಿ ಶೆಟ್ಟಿ, ಕೊಡುಗೈದಾನಿ ಕಾಂದಿವಿಲಿ ಅವೆನ್ಯೂ ಹೋಟೆಲ್ ನ ರಘುರಾಮ ಕೆ ಶೆಟ್ಟಿ, ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿ, ಭವಾನಿ ಶಿಪ್ಪಿಂಗ್ ನ ಸಿಎಂಡಿ ಕುಸುಮೋಧರ ಡಿ ಶೆಟ್ಟಿ, ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ್ ಶೆಟ್ಟಿ, ಕಾರ್ಯಕ್ರಮದ ಸಂಚಾಲಕರಾದ ಕಿಶೋರ್ ಕುಮಾರ್ ಕುತ್ಯಾರು, ಕಾರ್ಯಕ್ರಮದ ಉಸ್ತುವಾರಿ ಸುಕುಮಾರ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸುತ್ತಾ ಪ್ರಸ್ತಾವಿಕವಾಗಿ ಮಾತನಾಡಿ, ನಾವು ಬಂಟರೆಂಬ ಹೆಮ್ಮೆ ನಮಗಿದೆ. ಸಮಾಜದ ಹೆಜ್ಜೆ ನಮ್ಮ ಸಮಾಜದ ಉದ್ದಾರಕ್ಕಾಗಿ ಶಿಕ್ಷಣವೇ ಮೂಲ ಮಂತ್ರ ಎಂಬ ಧ್ಯೇಯದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಇದೀಗ ಬಂಟರ ಸಂಘದ ಮೂರು ಕಾಲೇಜುಗಳು ನಡೆಯುತ್ತಿದೆ. ಇಂದು ಇಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್.ಸಿ ಶೆಟ್ಟಿ, ನಡೆದಾಡುವ ದೇವರು ಎಂದೇ ಹೇಳಲ್ಪಡುವ ಅವೆನ್ಯೂ ರಘುರಾಮ ಕೆ ಶೆಟ್ಟಿ, ಕೊಡುಗೈದಾನಿ ಎನ್ನಲಾಗುವ ಕೃಷ್ಣ ಪ್ಯಾಲೇಸ್ ನ ಕೃಷ್ಣ ವೈ ಶೆಟ್ಟಿ, ಲತಾ ಜಯರಾಮ್ ಶೆಟ್ಟಿ, ಕೆ.ಡಿ ಶೆಟ್ಟಿ, ಮಹೇಶ್ ಎಸ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸುವೆನು. ಹಿಂದೆ ನಾವು ವಾರ್ಷಿಕ ಮಹಾಸಭೆಯಲ್ಲಿ ಈ ಕಾರ್ಯಕ್ರಮವನ್ನು ಇಡುತ್ತಿದ್ದೆವು, ಈ ಬಾರಿ ವಾರ್ಷಿಕ ಮಹಾಸಭೆಯು ಕಾರಣಾಂತರದಿಂದ ಮುಂದೂಡಲಾಗಿದ್ದುರಿಂದ ಈ ಕಾರ್ಯಕ್ರಮವನ್ನು ನಾವು ಇಲ್ಲಿ ಇಂದು ಮಾಡುತ್ತಿದ್ದೇವೆ. ಇದರ ಸದುಪಯೋಗವನ್ನು ಬಂಟ ಸಮಾಜದ ವಿದ್ಯಾರ್ಥಿಗಳೆಲ್ಲರೂ ಪಡೆಯುವಂತಾಗಲಿ ಎಂದರು. ಬಂಟ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಧಿ ನೀಡಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲರನ್ನೂ ಗೌರವಿಸಲಾಯಿತು. ಆರಂಭದಲ್ಲಿ ಅಧ್ಯಕ್ಷರು, ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟಗೀತೆಯನ್ನು ಮೊಳಗಿಸಲಾಯಿತು. ವಿಜಯ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಕಿಶೋರ್ ಕುಮಾರ್ ಕುತ್ಯಾರು ಅವರು ಸವಿಸ್ತಾರವಾಗಿ ವಿವರಿಸುತ್ತಾ ನಿರ್ವಹಿಸಿ, ಧನ್ಯವಾದಗೈದರು.
ವರದಿ : ಗುರುದತ್ ಪೂಂಜಾ ಮುಂಡ್ಕೂರು


















































































































