ನಿವೃತ್ತ ಬ್ಯಾಂಕ್ ಅಧಿಕಾರಿ, ಯಕ್ಷಗಾನ ಸಂಘಟಕ, ತಾಳಮದ್ದಳೆ ಅರ್ಥಧಾರಿ ಬೆಟ್ಟಂಪಾಡಿ ಸುಂದರ ಶೆಟ್ಟಿ ಅವರಿಂದ ಸಂಚಾಲಿತ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಗೆ ಹೆಸರಾಂತ ಯಕ್ಷಗಾನ ಕಲಾವಿದ, ಅರ್ಥಧಾರಿ, ಪತ್ರಕರ್ತ, ಸಂಶೋಧಕ ಡಾ| ತಾರನಾಥ ವರ್ಕಾಡಿ ಆಯ್ಕೆಯಾಗಿದ್ದಾರೆ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಅವರದ್ದು ಯಕ್ಷಗಾನ ಕ್ಷೇತ್ರದ ಹಾಸ್ಯ ಭೂಮಿಕೆಯಲ್ಲಿ ಬಹುದೊಡ್ಡ ಹೆಸರು. ಹಾಸ್ಯದ ಹೆಸರಲ್ಲಿ ಶಿಷ್ಟಾಚಾರ ಮೀರದ ಶುದ್ಧ ಮನೋರಂಜಕ ತೂಕದ ಮಾತು, ಅಂಗಭಾಷೆ, ಶಿಸ್ತಿನ ಕುಣಿತ ಇವು ಅವರ ಹಾಸ್ಯದ ವಿಶಿಷ್ಟತೆ. ಬೆಟ್ಟಂಪಾಡಿ ಸುಂದರ ಶೆಟ್ಟಿ ಅವರ ತೀರ್ಥರೂಪರಾದ ಬಾಳಪ್ಪ ಶೆಟ್ಟರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಉದ್ದೇಶದಿಂದ ಆರಂಭಗೊಂಡ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನ ಕದ್ರಿ ಸಂಸ್ಥೆಯಲ್ಲಿ ಯಕ್ಷಗಾನ ಕುರಿತ ವಿಶೇಷ ಮಾಹಿತಿ ಅನುಭವ ಇರುವ ಸದಸ್ಯರುಗಳಿದ್ದಾರೆ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಯನ್ನು ಈ ಬಾರಿ ಡಾ| ತಾರನಾಥ ವರ್ಕಾಡಿ ಅವರಿಗೆ ಯಕ್ಷಾಂಗಣ ಸಂಯೋಜನೆಯ ಸರಣಿ ತಾಳಮದ್ದಳೆ ಕಾರ್ಯಕ್ರಮ ಸಂದರ್ಭದಲ್ಲಿ ನವೆಂಬರ್ 26 ರಂದು ಸಂಜೆ 4.00ಕ್ಕೆ ರವೀಂದ್ರ ಕಲಾಭವನ ವಿಶ್ವ ವಿದ್ಯಾಲಯ ಕಾಲೇಜು ಹಂಪನಕಟ್ಟೆ ಮಂಗಳೂರು ಇಲ್ಲಿ ವಿಶೇಷ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಗುವುದೆಂದು ಸುಂದರ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















































































































