ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಹೆಸರನ್ನು ಮಾಡಿರುವ ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಬೆಳ್ಳಿಹಬ್ಬ ಆಚರಣೆಯ ಸಮಾರಂಭ ‘ರಜತ ರಶ್ಮಿ’ ಡಿಸೆಂಬರ್ 26ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸಹಕಾರ ರತ್ನ ಸವಣೂರು ಸೀತಾರಾಮ ರೈ ಹೇಳಿದರು. ನವೆಂಬರ್ 24 ರಂದು ಸಂಸ್ಥೆಯ ಸಭಾಂಗಣದಲ್ಲಿ ಬೆಳ್ಳಿಹಬ್ಬ ಆಚರಣೆಯ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ಸಂಸ್ಥೆಯು ೨೦೦೧ ಮೇ ೨೩ ರಂದು ಪ್ರಾರಂಭಗೊಂಡಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಂಗ್ಗಮಾಧ್ಯಮ ಶಿಕ್ಷಣದೊಂದಿಗೆ ಸಕಲ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥೆಯನ್ನು ನೀಡುವುದರ ಜೊತೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳು ಕಲಿಕೆಗೆ ಇಲ್ಲಿಗೆ ಆಗಮಿಸಿ, ಉತ್ತಮ ಶಿಕ್ಷಣ ಪಡೆದು, ಇಂದು ದೇಶ ವಿದೇಶಗಳಲ್ಲಿ ಉನ್ನತವಾದ ಹುದ್ದೆಗಳಲ್ಲಿ ಇದ್ದಾರೆ. ಇದು ನಮಗೆ ತುಂಬಾ ಸಂತೋಷದ ವಿಚಾರ. ಸಂಸ್ಥೆಯ ಬೆಳ್ಳಿಹಬ್ಬವನ್ನು ಅರ್ಥಪೂರ್ಣ ಕಾರ್ಯಕ್ರಮವಾಗಿ ರೂಪಿಸುವ ನಿಟ್ಟಿನಲ್ಲಿ ಡಿಸೆಂಬರ್ 26 ರಂದು ರಂದು ಬೆಳಿಗ್ಗೆ ಸವಣೂರು ಬಸದಿ ವಠಾರದಿಂದ ಮುಖ್ಯರಸ್ತೆಯಾಗಿ ಸಂಸ್ಥೆಯ ವಠಾರಕ್ಕೆ ಅದ್ದೂರಿಯಾದ ಮೆರವಣಿಗೆಯನ್ನು ಆಯೋಜಿಸಲಿದ್ದೇವೆ. ಬಳಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು. ರಜತ ಸಂಭ್ರಮದ ನಿಟ್ಟಿನಲ್ಲಿ ನಾವು ಸಂಸ್ಥೆಯ ಅವರಣದಲ್ಲಿ ೪೦ ಬಗೆಯ ವಿವಿಧ ಸ್ಟಾಲ್ಗಳನ್ನು ಹಾಕಲಿದ್ದೇವೆ. ಈ ಸ್ಟಾಲ್ನಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಅನೇಕ ಬಗೆಯ ವಸ್ತುಗಳ ಮಾರಾಟ, ಪ್ರದರ್ಶನ ಇರಲಿದೆ ಎಂದು ಸೀತಾರಾಮ ರೈ ತಿಳಿಸಿದರು.
‘ರಜತರಶ್ಮಿ’ ಕಾರ್ಯಕ್ರಮದ ಗೌರವಾಧ್ಯಕ್ಷ ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, ಕಾರ್ಯಕ್ರಮ ಸಂಘಟಿಸುವುದರಲ್ಲಿ ಸೀತಾರಾಮ ರೈ ಅವರು ಬಹಳಷ್ಟು ಹೆಸರನ್ನು ಪಡೆದಿದ್ದಾರೆ. ವಿದ್ಯಾರಶ್ಮಿ ವಿದ್ಯಾಲಯ ಮತ್ತು ಆದರ್ಶ ವಿವಿಧೋದ್ದೇಶ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿರುವ ಸೀತಾರಾಮ ರೈ ಅವರನ್ನು ವಿದ್ಯಾರಶ್ಮಿ ಸಂಸ್ಥೆಯ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಸವಣೂರು ಬಸದಿ ವಠಾರದಿಂದ ವಿದ್ಯಾರಶ್ಮಿ ವಿದ್ಯಾಲಯದ ತನಕ ರಥದ ಮೂಲಕ ವೈಭವಯುತವಾದ ಮೆರವಣಿಗೆಯಲ್ಲಿ ಕರೆತರಲಾಗುವುದು. ಮೆರವಣಿಗೆಯನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗುವುದು. ಕಲ್ಲಡ್ಕ ಗೊಂಬೆಗಳ ಕುಣಿತದೊಂದಿಗೆ ಮೆರವಣಿಗೆಯ ಮೆರಗು ಹೆಚ್ಚಲಿದೆ ಎಂದರು. ಸೀತಾರಾಮ ರೈ ಓರ್ವ ಸಾಧಕರು, ಅವರ ನೇತೃತೃದಲ್ಲಿ ನಡೆಯುವ ಸಂಸ್ಥೆಯ ಬೆಳ್ಳಿಹಬ್ಬ ಮಾದರಿ ಕಾರ್ಯಕ್ರಮವಾಗಬೇಕು ಎಂದು ಬಾಲ್ಯೊಟ್ಟು ಹೇಳಿದರು. ನ್ಯಾಯವಾದಿ ಎನ್ ಜಯಪ್ರಕಾಶ್ ರೈ ಸುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಪ್ರಮುಖರಾದ ಪಿ.ಡಿ ಕೃಷ್ಣಕುಮಾರ್ ರೈ ದೇವಸ್ಯ, ಸುದರ್ಶನ್ ನಾಯ್ಕ್ ಕಂಪ, ಕುಸುಮಾ ಶೆಟ್ಟಿ ಕೆರೆಕ್ಕೋಡಿ, ಸುರೇಶ್ ರೈ ಸೂಡಿಮುಳ್ಳು, ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಟ್ರಸ್ಟಿಗಳಾದ ಎನ್ ಸುಂದರ ರೈ ಸವಣೂರು, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ರಾಜಲಕ್ಷ್ಮಿ ಎಸ್ ರೈ, ಸಂಸ್ಥೆಯ ರಕ್ಷಕ ಶಿಕ್ಷಕ ಅಧ್ಯಕ್ಷ ಡಾ. ಜೀವನ್ ಪ್ರಕಾಶ್ ರೈ ಉಪಸ್ಥಿತರಿದ್ದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಸ್ವಾಗತಿಸಿ, ಉಪನ್ಯಾಸಕಿ ಕಸ್ತೂರಿ ವಂದಿಸಿದರು. ಶಿಕ್ಷಕಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪ್ರತಿಭಾ ಸ್ಮರಣ ಸಂಚಿಕೆ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಜಿ.ಪಂ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಸತೀಶ್ ಬಲ್ಯಾಯ ಕನ್ನಡಕುಮೇರು, ಸವಣೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ ಕೆಡೆಂಜಿ, ಸಂಗೀತ ಪ್ರತಿಭೆ ಅಖಿಲಾ ನೆಕ್ರಾಜೆ, ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.



ಚಿತ್ರ, ವರದಿ : ಉಮಾಪ್ರಸಾದ್ ರೈ


















































































































