ಐಲೇಸಾ -ದಿ ವಾಯ್ಸ್ ಆಫ್ ಓಷನ್ ಸಂಸ್ಥೆಯ ವತಿಯಿಂದ ಸುಧಾಕರ್ ಶೆಟ್ಟಿ ಅವರ ಪರಿಕಲ್ಪನೆ ಹಾಗೂ ಗಾಯನದಲ್ಲಿ ಮೂಡಿ ಬಂದಿರುವ ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ‘ಸನ್ನಿಧಾನ’ ಕನ್ನಡ ಆವೃತ್ತಿಯು ನವೆಂಬರ್ 15 ರಂದು ಸಂಜೆ 7.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಮೂಲತಃ ಕೇರಳದಲ್ಲಿ ಮಲಯಾಳಂ ಭಾಷೆಯಲ್ಲಿ ಮೂಡಿ ಬಂದಿರುವ ಈ ಸುಂದರ ಭಕ್ತಿಗೀತೆಗೆ ಕನ್ನಡ ಸಾಹಿತ್ಯವನ್ನು ರಚಿಸಿ ಸುಧಾಕರ್ ಶೆಟ್ಟಿ ಅವರೇ ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ್ದಾರೆ. ರಾಜಾರಾಮ್ ಶೆಟ್ಟಿ ಉಪ್ಪಳ ನಿರ್ಮಾಪಕತ್ವದ ಹಾಡಿನ ನೃತ್ಯ ಸಂಯೋಜನೆಯನ್ನು ವಿದ್ಯಾಜ್ಯೋತಿ ಶಾಲೆಯ ಪ್ರಾಂಶುಪಾಲರಾದ ಮಾಲತಿ ಅವರು ನಿರ್ವಹಿಸಿದ್ದಾರೆ. ಟ್ರಸ್ಟಿ ಹರಿದಾಸನ್, ಸವಿತಾ ಸುಧಾಕರ್ ಶೆಟ್ಟಿ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಹಾಡಿನ ಹಿನ್ನೆಲೆ ಹಾಗೂ ವಿಶೇಷತೆಗಳ ಕುರಿತು ಐಲೇಸಾದ ಶಾಂತರಾಮ್ ಶೆಟ್ಟಿ ಮಾತನಾಡಲಿದ್ದಾರೆ. ಬಳಿಕ ಡಾ. ಸಂತೋಷ್ ಗುರೂಜಿ ಅವರ ದಿವ್ಯ ಹಸ್ತದಿಂದ ಝೂಮ್ ಡಿಜಿಟಲ್ ವೇದಿಕೆಯಲ್ಲಿ ಹಾಡು ಲೋಕಾರ್ಪಣೆಗೊಳ್ಳಲಿದೆ.




ಈ ವಿಶೇಷ ಕಾರ್ಯಕ್ರಮದಲ್ಲಿ ‘ಪ್ರೇಮದ ಊರಲಿ’ ತಂಡದ ಪುಟಾಣಿ ಕಲಾವಿದರು ಹಾಗೂ ವಂದನಾ ರೈ ಕೂಡಾ ಭಾಗವಹಿಸಲಿದ್ದಾರೆ. ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆಳ್ವಾಸ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪ್ರಾಪ್ತಿ ರಮೇಶ್ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕಾರ್ಯಕ್ರಮದ ನಡುವೆ ರಮೇಶಚಂದ್ರ ಅವರಿಂದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸವಿತಾ ಸುಧಾಕರ್ ಶೆಟ್ಟಿ ಅವರು ಸ್ವಾಗತಿಸಲಿದ್ದಾರೆ. ಐಲೇಸಾದ ಆನಂತ್ ರಾವ್ ಅವರು ಗಣ್ಯರನ್ನು ಪರಿಚಯಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಐಲೇಸಾದ ಬೇಬಿ ಸ್ವರಾ ಸೂರಿ ಮಾರ್ನಾಡ್ ಅವರು ನಿರೂಪಿಸಲಿದ್ದಾರೆ.
ಕಾರ್ಯಕ್ರಮದ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿಯನ್ನು ಐಲೇಸಾದ ಗೋಪಾಲ್ ಪಟ್ಟೆ ಅವರು ವಹಿಸಲಿದ್ದಾರೆ. ಸಂಜೆ 7:30ಕ್ಕೆ ಝೂಮ್ ಡಿಜಿಟಲ್ ವೇದಿಕೆಯಲ್ಲಿ ಝೂಮ್ ಐಡಿ 6312386199 ಪಾಸ್ ಕೋಡ್ 1225 ಅನ್ನು ನಮೂದಿಸಿ ಪಾಲ್ಗೊಳ್ಳಬಹುದು. ಈ ಭಕ್ತಿಪೂರ್ಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಐಲೇಸಾದ ಮುಂಬಯಿ ವಕ್ತಾರ ಸೂರಿ ಶೆಟ್ಟಿ ಮಾರ್ನಾಡ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


















































































































