ಮುಂಬಯಿ ಮಹಾನಗರದಲ್ಲಿ ವಿಭಿನ್ನ ರೀತಿಯ ಕಲಾ ಪ್ರಕಾರಗಳನ್ನು, ನಮ್ಮ ತವರೂರ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಗಳನ್ನು, ಧಾರ್ಮಿಕ ಶ್ರದ್ಧಾ ಮನೋಭಾವಗಳನ್ನು ಉಳಿಸಿ, ಬೆಳೆಸುವಲ್ಲಿ ಕಲಾವಿದರುಗಳ, ಧಾರ್ಮಿಕ ಚಿಂತಕರುಗಳ ಪಾತ್ರ ಎಷ್ಟಿದಿಯೋ ಈ ಎಲ್ಲಾ ಮಾಧ್ಯಮಗಳ ಬೆಳವಣಿಗೆಯ ಹಿಂದೆ ಕಲಾ ಪ್ರೋತ್ಸಾಹಕ, ಧಾರ್ಮಿಕ ಚಿಂತನಾಶೀಲಾ ಹೃದಯ ಶ್ರೀಮಂತ ದಾನಿಗಳ ಯೋಗದಾನ ಅಷ್ಟೇ ಮಹತ್ವವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊಟ್ಟೆಪಾಡನ್ನು ಅರಸಿ ಮುಂಬಯಿ ಮಹಾನಗರಕ್ಕೆ ಬಂದು ಈ ಮಹಾನಗರಿಯನ್ನು ಕರ್ಮಭೂಮಿಯನ್ನಾಗಿ ಸ್ವೀಕರಿಸಿ ತಮ್ಮ ಉದ್ದೇಶವನ್ನು ಸಾಕಾರಗೊಳಿಸುವುದರ ಜೊತೆಗೆ ತಮ್ಮನ್ನು ತಾವು ಕಲಾವಿದರನ್ನಾಗಿ, ಕಲಾ ಸಂಘಟಕರನ್ನಾಗಿ, ಸಮಾಜ ಸೇವಕರನ್ನಾಗಿ, ಧಾರ್ಮಿಕ ಸೇವಾ ಕಾರ್ಯಕರ್ತರನ್ನಾಗಿ ಗುರುತಿಸಿಕೊಂಡಿರುವ ಒಂದು ವರ್ಗವಿದೆ. ಅವರ ಈ ಎಲ್ಲಾ ಕಾರ್ಯಗಳಿಗೆ ನಿರಂತರ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿರುವ ಇನ್ನೊಂದು ವರ್ಗವನ್ನು ನಾವಿಲ್ಲಿ ಅಭಿಮಾನದೊಂದಿಗೆ ಸ್ಮರಿಸಬೇಕಾಗಿದೆ. ಅಂತಹ ದಾನಿಗಳ, ಪ್ರೋತ್ಸಾಹಕರ ಸಾಲಿನ ಹಿರಿಯರಾದ ಕೃಷ್ಣ ಡಿ ಶೆಟ್ಟಿಯವರು ಓರ್ವರೆನ್ನಬಹುದು. ಎಲ್ಲಾ ತುಳು ಕನ್ನಡಿಗರಂತೆ ಅನ್ನದ ಬಟ್ಟಲನ್ನು ಹುಡುಕುತ್ತಾ ಈ ಮಹಾನಗರಕ್ಕೆ ಬಂದಿದ್ದ ಇವರು ತಮ್ಮ ಬದುಕಿನ ಆಡಿಪಾಯ ಗಟ್ಟಿಯಾಗುತ್ತಿದ್ದಂತೆ ಸಮಾಜಪರ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂಬಯಿ ಮಹಾನಗರದಲ್ಲಿ ಅಪ್ಪಟ ಕಲಾ ಪ್ರೇಮಿಯಾಗಿ, ಕಲಾಪೋಷಕರಾಗಿ, ವಿಭಿನ್ನ ರೀತಿಯಲ್ಲಿ ಸಮಾಜ ಸೇವಕರಾಗಿ, ಕೊಡುಗೈ ದಾನಿಯಾಗಿ ಎಲೆ ಮರೆಯ ಕಾಯಿಯಂತೆ ತಮ್ಮ ಮಾನವೀಯತೆಯ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿರಿಸಿಕೊಂಡಿದ್ದಾರೆ. ಪಂಜಿನಡ್ಕ ದಿಂಬ ಶೆಟ್ಟಿ ಹಾಗೂ ಎಕ್ಕಾರು ಪೂವಮ್ಮ ಶೆಟ್ಟಿ ದಂಪತಿಗಳ ಮಗನಾಗಿ ಜನ್ಮವೆತ್ತಿದ ಕೃಷ್ಣ ಡಿ ಶೆಟ್ಟಿಯವರು ಪ್ರಾಥಮಿಕ ಶಿಕ್ಷಣವನ್ನು ಕೊಲಕಾಡಿಯ ವಿದ್ಯಾ ಪ್ರಸಾರಿಣಿ ಶಾಲೆಯಿಂದಲೂ, ಪ್ರೌಢ ಶಿಕ್ಷಣವನ್ನು ಪೊಂಪೈ ಹೈಸ್ಕೂಲ್ ನಲ್ಲಿ ಪೂರ್ಣಗೊಳಿಸಿ, ಉದರನಿಮಿತ್ತ ಮಯಾನಗರಿ ಮುಂಬಯಿಯತ್ತ ಪಾದ ಬೆಳೆಸಿದರು. ದುಡಿಮೆಯ ಅನುಭವವನ್ನೇ ಬಂಡವಾಳವಾಗಿಸಿಕೊಂಡು ಹೋಟೆಲ್ ಉದ್ಯಮಕ್ಕೆ ಮನ ಮಾಡಿದ ಹಿನ್ನೆಲೆಯಲ್ಲಿ 1958ರಲ್ಲಿ ಪ್ರಸಾದ್ ಹೋಟೆಲ್ ತಲೆ ಎತ್ತಿ ನಿಂತಿತು. ತಮ್ಮ ಅನುಭವ, ಶಿಸ್ತುಬದ್ಧ ವ್ಯವಹಾರ ಕೌಶಲ್ಯತೆಯಿಂದ ಯಶಸ್ಸು ಇವರ ಪಾಲಿಗೆ ಒಲಿದು ಬರಲಾರಂಬಿಸಿತು.
ಈ ಸಂದರ್ಭದಲ್ಲಿ ಅವರ ಬದುಕಿನಲ್ಲಿ ನಾವು ಕಂಡುಕೊಳ್ಳಬಹುದಾದ ವಿಶೇಷತೆ ಏನೆಂದರೆ ಸಂಪಾದನೆ ಏರಿಕೆಯಾದಾಗ ಅದನ್ನು ಅವರು ತಲೆಗೇರಿಸಿಕೊಳ್ಳದೆ ಮನಕ್ಕಿಳಿಸಿಕೊಂಡರು. ಇದರ ಪರಿಣಾಮವಾಗಿ ಕಲಾಸೇವೆ, ಸಮಾಜಪರ ಸೇವಾ ಕಾರ್ಯಗಳಿಗೆ ಇವರ ಯೋಗದಾನ ಸಂದಾಯವಾಗಲಾರಂಬಿಸಿತು. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒಲವು ತೋರಿಸಲಾರಂಬಿಸಿದರು. ಆರ್ಥಿಕ ತೊಂದರೆಯಿಂದ ಮಕ್ಕಳು ವಿದ್ಯಾ ವಂಚಿತರಾಗಬಾರದೆಂದು ಎನ್ನುವ ಮನದಾಸೆಯೊಂದಿಗೆ ವಾಮಂಜೂರಿನ ಅಮೃತೇಶ್ವರ ಶಾಲೆ, ಶಿರ್ವದ ಸುಂದರ್ ರಾಮ್ ಶೆಟ್ಟಿ ಶಾಲೆಗಳಿಗೆ ಕೊಠಡಿ ನಿರ್ಮಾಣಕ್ಕೆ ಸಹಾಯ, ಎಕ್ಕಾರು ಪ್ರಾಥಮಿಕ ಶಾಲೆಗೆ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಠಡಿ, ಬೆಂಚು, ಪುಸ್ತಕ ವಿತರಣೆಗೆ ಸಹಾಯ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿಗೆ ಸ್ವಾಗತ ಕಮಾನು ನಿರ್ಮಾಣ, ಉಲ್ಲಂಜೆ ಶಾಲೆಗೆ ಕಳೆದ ಹಲವು ವರ್ಷಗಳಿಂದ ಪುಸ್ತಕ ವಿತರಣೆ ಇತ್ಯಾದಿ ಸೇವೆಗಳು ಇವರ ಮನದಾಳಕ್ಕೆ ಇoಗಿತಕ್ಕೆ ಪುಷ್ಠಿ ನೀಡುವಂತಾದವು. ಹೋಟೆಲ್ ಉದ್ಯಮದ ತಮ್ಮ ಯಶಸ್ವಿಗೆ ಆಹಾರ್, ಸಮಾಜಪರ ಸೇವೆಗಳಿಗಾಗಿ ಬಾಂಬೇ ಬಂಟ್ಸ್ ಅಸೋಸಿಯೇಷನ್ ಮತ್ತು ಎಕ್ಕಾರು ಬಂಟರ ಸಂಘ, ವಿದ್ಯಾ ಸೇವಾ ಕೈಂಕರ್ಯಗಳಿಗಾಗಿ ಬಂಟರ ಸಂಘ ಮುಂಬಯಿಯ ಉನ್ನತ ಶಿಕ್ಷಣ ಸಮಿತಿ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ, ಧಾರ್ಮಿಕ ಸೇವೆಗಳಿಗಾಗಿ ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ಗೌರವ, ಸನ್ಮಾನಗಳನ್ನು ಸ್ವೀಕರಿಸಿದ ಹಿರಿತನವು ಇವರದ್ದಾಗಿದೆ.



94ರ ಇಳಿವಯಸ್ಸಿನಲ್ಲೂ ತಮ್ಮ ಚತುರತೆ ಇಂದಿನ ಯುವಕರಿಗೆ ಆದರ್ಶರಾಗಿಸಿಕೊಂಡು ಪುತ್ರ ಪ್ರಸಾದ್, ಪುತ್ರಿಯರಾದ ಸುಜಾತ, ಸುನೀತಾ, ಸವಿತಾ ಸೊಸೆ, ಅಳಿಯಂದಿರು, ಮೊಮ್ಮಕ್ಕಳೊಂದಿಗಿನ ಸಂತೃಪ್ತ ಸಂಸಾರವನ್ನು ಮುನ್ನಡೆಸುತ್ತಿರುವ ಇವರನ್ನು ಇದೀಗ ಮುಂಬಯಿಯ ಪ್ರತಿಷ್ಠಿತ ಕಲಾ ಸಂಸ್ಥೆಯಲ್ಲೊಂದಾದ ಕೆ.ಎ.ಎಸ್ ಎಂಟರ್ಟೈನ್ ಮೆoಟ್ ಮುಂಬಯಿ ಇದರ ವತಿಯಿಂದ ಅವರ ಅಪ್ರತಿಮ ಕಲಾಭಿಮಾನವನ್ನು ಮತ್ತು ಸಮಾಜಪರ ಕಾಳಜಿಯನ್ನು ಗುರುತಿಸಿ ಸತ್ಕರಿಸಲು ಮುಂದಾಗಿದ್ದಾರೆ. ಕೆ.ವಿ.ಎಸ್ ಎಂಟರ್ಟೈನ್ ಮೆoಟ್ ಮುಂಬಯಿ ಎಂಬ ಈ ಸಂಸ್ಥೆ ಕಳೆದ ಒಂದು ದಶಕದಿಂದ ತುಳು ಕನ್ನಡ ಭಾಷೆಯ ಬೆಳವಣಿಗೆಗಾಗಿ ವಿಭಿನ್ನ ರೀತಿಯಲ್ಲಿ ಮುಂಬಯಿ ಮಹಾನಗರದಲ್ಲಿ ಕಾರ್ಯ ನಿರತವಾಗಿದೆ. ವಿವಿಧ ಕಲಾ ಪ್ರಕಾರಗಳಾದ ನಾಟಕ, ಯಕ್ಷಗಾನ, ಸಂಗೀತದ ಕ್ಷೇತ್ರಗಳಲ್ಲಿ ಯುವ ಕಲಾವಿದರಿಗೆ ವೇದಿಕೆಯನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ. ಇದೀಗ ನವೆಂಬರ್ 15ರ ರವಿವಾರ ಪೂರ್ವಾಹ್ನ 11:00 ಗಂಟೆಗೆ ಮೀರಾರೋಡ್ ಪೂರ್ವದಲ್ಲಿರುವ ಗಾನ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಸಭಾಭವನದಲ್ಲಿ ಸಂಸ್ಥೆಯ ಬಹುಪ್ರಸಿದ್ಧಿಯ ತುಳು ಹಾಸ್ಯ ನಾಟಕ ‘ಈ ರಾತ್ರಿಗ್… ಪಗೆಲ್ಗ್ ಯಾನ್’ ನಾಟಕದ 15ನೇ ಪ್ರದರ್ಶನವು ಪ್ರದರ್ಶಿಸಲಿದೆ. ಈಗಾಗಲೇ ಈ ನಾಟಕ ಮುಂಬಯಿ, ಪುಣೆ, ನಾಸಿಕ್, ಸೂರತ್ ನಲ್ಲೂ ಪ್ರದರ್ಶನ ಮಾಡಿ ಜನ ಮೆಚ್ಚುಗೆಯನ್ನು ಪಡೆದಿದೆ. ಈ ಪ್ರದರ್ಶನದ ಸಂದರ್ಭದಲ್ಲಿ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಹಿರಿಯ ಚೇತನ ಕೃಷ್ಣ ಡಿ ಶೆಟ್ಟಿಯವರಿಗೆ ‘ಕಲಾಪೋಷಕ ರತ್ನ’ ಪ್ರಶಸ್ತಿಯನ್ನು ಪ್ರದಾನಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ನಾಟಕ ಪ್ರದರ್ಶನಕ್ಕೆ ಮತ್ತು ಇದೇ ವೇಳೆ ಜರಗಲಿರುವ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು, ಕಲಾ ಪೋಷಕರು, ಸಂಘಟಕರು ಬಂದು ಸಹಕರಿಸುವಂತೆ ಕೆ.ವಿ.ಎಸ್ ಎಂಟರ್ಟೈನ್ ಮೆoಟ್ ಮುಂಬಯಿ ಸಂಸ್ಥೆಯ ವತಿಯಿಂದ ವಿನಂತಿಸಿಕೊಳ್ಳಲಾಗಿದೆ.


















































































































