ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾoತ ಉಪಕುಲಪತಿ, ಎನ್ಐಟಿಕೆ ನಿವೃತ್ತ ಪ್ರಾಂಶುಪಾಲ, ಶಿಕ್ಷಣ ತಜ್ಞ ಡಾ| ಎನ್.ಆರ್ ಶೆಟ್ಟಿ (90) ಅವರು ನವೆಂಬರ್ 12 ರಂದು ನಿಧನ ಹೊಂದಿದರು. ಮೂಲತಃ ನಿಟ್ಟೆ ಗ್ರಾಮದ ಕುಂಟಲ್ಪಾಡಿ ನಿವಾಸಿಯಾಗಿದ್ದ ಡಾ| ಎನ್.ಆರ್ ಶೆಟ್ಟಿ ಅವರು ಗುರುವಾರ ಮುಂಜಾನೆ ಕೊನೆಯುಸಿರೆಳೆದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪದವಿ ಪಡೆದು ಇಂಗ್ಲೆಂಡ್ ನ ಎಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಆಪೋಟ್ – ಎಲೆಕ್ಟ್ರಾನಿಕ್ಸ್ ) ಮತ್ತು ಮುಂಬಯಿ ಐಐಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪದವಿ ಪಡೆದಿದ್ದರು. ಸುರತ್ಕಲ್ ಎನ್ಐಟಿಕೆ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಎರಡು ಅವಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ (ಐಜಿಎನ್ ಸಿಎ) ಸದಸ್ಯ ಕಾರ್ಯದರ್ಶಿಯಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿಯೂ ಕರ್ತವ್ಯ ಸಲ್ಲಿಸಿದ್ದರು. ಕಲ್ಬುರ್ಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು.
ನಿಟ್ಟೆ ಸಮೂಹ ಸಂಸ್ಥೆಗಳ ಸಂಸ್ಥಾಪಕ ಎನ್ ವಿನಯ ಹೆಗ್ಡೆ ಅವರ ಪತ್ನಿಯ ಅಕ್ಕ ವತ್ಸಲಾ ಶೆಟ್ಟಿ ಅವರನ್ನು ವರಿಸಿದ್ದ ಎನ್.ಆರ್ ಶೆಟ್ಟಿ ಅವರು ಬೆಂಗಳೂರು ಯಲಹಂಕದಲ್ಲಿರುವ ನಿಟ್ಟೆ ಕಾಲೇಜಿನ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಿಟ್ಟೆ ಕಾಲೇಜು ನಿರ್ದೇಶಕರಾಗಿ ಅತ್ಯುತ್ತಮ ರೀತಿಯಲ್ಲಿ ಸಂಸ್ಥೆ ಮುನ್ನಡೆಸಿದ್ದರು. ನಿವೃತ್ತಿ ಬಳಿಕ ಕುಂಟಲ್ಪಾಡಿಯಲ್ಲಿ ನೆಲೆಸಿದ್ದ ಅವರು ಶೈಕ್ಷಣಿಕ ಮಾತ್ರವಲ್ಲದೇ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದವರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.





















































































































