ಕುಂದಾಪುರದಲ್ಲಿ ವೈದ್ಯಕೀಯ, ಶಿಕ್ಷಣ, ರೋಟರಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಪ್ರಮುಖರಲ್ಲಿ ಡಾ. ಬಿ.ಬಿ ಹೆಗ್ಡೆ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಲು, ಜೊತೆಗೆ ನೂರಾರು ಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಡಾ. ಬಿ.ಬಿ ಹೆಗ್ಡೆಯವರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಕಾಲೇಜು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಬಿ.ಬಿ ಹೆಗ್ಡೆ ಹಾಗೂ ಸ್ಥಳದಾನ ಮಾಡಿದ ಮಹಾತಾಯಿ ಸೌಕೂರು ಸೇರ್ವೆಗಾರ ಮನೆ ವಿಶಾಲಾಕ್ಷಿ ಬಿ. ಹೆಗ್ಡೆ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿದರು.
ಇವರು ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ಡಾ. ಬಿ.ಬಿ ಹೆಗ್ಡೆ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತಾರಾಮ ನಕ್ಕತಾಯ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ| ಡಾ. ಕೆ ಉಮೇಶ್ ಶೆಟ್ಟಿ ಆಶಯ ನುಡಿಗಳ್ನಾಡಿದರು. ಉಪ ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಪ್ರವೀಣಾ ಎಮ್ ಪೂಜಾರಿ ವಂದಿಸಿ, ರಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





















































































































