ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರಕುವ ಈ ಐತಿಹಾಸಿಕ ಸಂದರ್ಭದಲ್ಲಿ, ಈ ಮಹತ್ವದ ನಿರ್ಧಾರಕ್ಕೆ ಕಾರಣರಾದ ಕರ್ನಾಟಕದ ಪ್ರಸ್ತುತ ಸರ್ಕಾರಕ್ಕೆ ಹಾಗೂ ಮಾನ್ಯ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ , ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ಬಂಟ ಸಮುದಾಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಈ ಕ್ಷಣವು ಕೇವಲ ಇಂದಿನ ಸಾಧನೆಯಲ್ಲ. ಇದು ಹಲವು ದಶಕಗಳ ಕನಸು, ಹೋರಾಟ ಮತ್ತು ನಿರಂತರ ಪ್ರಯತ್ನಗಳ ಫಲ.
ತುಳು ಭಾಷೆಯ ಉಳಿವು, ಬೆಳವಣಿಗೆ ಮತ್ತು ಅಧಿಕೃತ ಮಾನ್ಯತೆಗಾಗಿ ಬಹು ವರ್ಷಗಳ ಕಾಲ ಧ್ವನಿ ಎತ್ತಿದ ಹಿರಿಯರು, ಸಾಹಿತಿಗಳು, ಸಂಶೋಧಕರು, ಕಲಾವಿದರು, ಸಂಘ ಸಂಸ್ಥೆಗಳು, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಸಂಖ್ಯಾತ ತುಳು ಭಾಷಾ ಪ್ರೇಮಿಗಳಿಗೆ ಈ ಸಂದರ್ಭದಲ್ಲಿ ನಮ್ಮ ಹೃದಯಪೂರ್ವಕ ನಮನಗಳು.ತಮ್ಮ ಜೀವನದ ಅಮೂಲ್ಯ ಸಮಯವನ್ನು ತುಳು ಭಾಷೆಗಾಗಿ ಸಮರ್ಪಿಸಿದ, ಹಲವು ಬಾರಿ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತಮ್ಮ ಹೋರಾಟವನ್ನು ನಿಲ್ಲಿಸದ ಎಲ್ಲರ ಪರಿಶ್ರಮವನ್ನು ಇಂದು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಎಂದವರು ತಿಳಿಸಿದ್ದಾರೆ.
ಒಂದು ಭಾಷೆಗೆ ಮಾನ್ಯತೆ ದೊರಕುವುದು ಎಂದರೆ ಕೇವಲ ಒಂದು ಆಡಳಿತಾತ್ಮಕ ನಿರ್ಧಾರವಲ್ಲ. ಅದು ಒಂದು ಜನ ಸಮುದಾಯದ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರಕುವ ಗೌರವ. ಕನ್ನಡದ ನೆಲದಲ್ಲಿ ಕನ್ನಡದೊಂದಿಗೆ ತುಳು ಕೂಡ ಗೌರವದಿಂದ ಅರಳಲಿ; ತುಳು ಸಾಹಿತ್ಯ, ಕಲೆ, ಶಿಕ್ಷಣ ಮತ್ತು ಆಡಳಿತದ ಕ್ಷೇತ್ರಗಳಲ್ಲಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ ಎಂಬುದು ನಮ್ಮ ಆಶಯ. ಈ ಐತಿಹಾಸಿಕ ಹೆಜ್ಜೆಯನ್ನು ಇಟ್ಟ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಬಂಟರ ಯಾನೆ ನಾಡವರ ಮಾತೃ ಸಂಘದ ಹೃತ್ಪೂರ್ವಕ ಧನ್ಯವಾದಗಳು. ಇದು ಒಬ್ಬರ ಗೆಲುವಲ್ಲ. ಇದು ತಲೆಮಾರುಗಳ ಕನಸಿನ ಸಾಕಾರ. ಇದು ಹೋರಾಡಿದವರ ಜಯ, ತುಳುವನ್ನು ಉಳಿಸಿದವರ ಜಯ, ತುಳುವನ್ನು ಪ್ರೀತಿಸಿದ ಪ್ರತಿಯೊಬ್ಬ ತುಳುವನ ಜಯ. ಸರ್ವರಿಗೂ ಹೃದಯಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು.















































































































