ತುಳುವ ಮಹಾಸಭೆಯು 2028ಕ್ಕೆ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ತುಳು ಚಳುವಳಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ತುಳುವರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಾರಂಭಿಸಿದ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಬೆಂಗಳೂರು ವಲಯದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರಧಾನ ಸಂಚಾಲಕರಾಗಿ ಉದ್ಯಮಿ ಶಾಂತಾರಾಮ್ ವಿ. ಶೆಟ್ಟಿಯವರು ನೇಮಕಗೊಂಡಿದ್ದಾರೆ. ಸಾಹಿತ್ಯ ಮತ್ತು ಸಂಗೀತದ ಸೇವಕ, ಉಡುಪಿಯ ಶಾಂತಾರಾಮ್ ವಿ ಶೆಟ್ಟಿ ಅವರು ವಿಜ್ಞಾನ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ತುಳು ಸಾಹಿತ್ಯ, ಸಂಗೀತ, ಭಾಷೆ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರ ‘ಮಣ್ಣ ಬಾಜನ’ ಕವನ ಸಂಕಲನಕ್ಕೆ ತುಳು ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದ್ದು, ಅವರು ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಮೂರು ಬಾರಿ ಭಾಗವಹಿಸಿದ್ದಾರೆ.
ಐಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ತುಳು ಸಂಗೀತದ ಜಾಗತಿಕ ಪ್ರಸಾರಕ್ಕೆ ಶ್ರಮಿಸುತ್ತಿದ್ದಾರೆ. ಸಂಗೀತ ಸಾಮ್ರಾಟ್ ವಿ. ಮನೋಹರ್ ಅವರೊಂದಿಗೆ ಸುಮಾರು 35 ತುಳು ಹಾಡುಗಳನ್ನು ಬಿಡುಗಡೆಗೆ ಸಿದ್ಧಪಡಿಸುವ ಕಾರ್ಯದಲ್ಲಿದ್ದಾರೆ. ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ ಮೂಲಕವೂ ತುಳು ಭಾಷೆಯ ಮೂಲ ಸ್ವರೂಪವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿರಿಯ ಸಾಧಕರನ್ನು ಗೌರವಿಸುವ ‘ವಯೋ ಸಮ್ಮಾನ್’ ಯೋಜನೆಯ ಮೂಲಕವೂ ಸಾಹಿತ್ಯ, ಸಂಗೀತ ಹಾಗೂ ಭಾಷಾ ಕ್ಷೇತ್ರದ ಹಿರಿಯರನ್ನು ಸನ್ಮಾನಿಸುವ ಕಾರ್ಯ ನಡೆಸುತ್ತಿದ್ದಾರೆ. ಇವರ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ತುಳು ಭಾಷೆ ಸಂಸ್ಕೃತಿಯ ಮೇಲಿನ ಬದ್ಧತೆಯನ್ನು ಬಳಸಿಕೊಂಡು ಬೆಂಗಳೂರಿನ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು.



ಈ ನೇಮಕಾತಿಯನ್ನು ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ ನೇಮಕ ಮಾಡಿದ್ದು, ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಕಟೀಲು, ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ನಿರ್ದೇಶಕರಾದ ಡಾ| ರಾಜೇಶ್ ಕೃಷ್ಣ ಆಳ್ವ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ, ಅವರ ಸೇವೆಯಿಂದ ಬೆಂಗಳೂರು ವಲಯದಲ್ಲಿ ತುಳು ಸಂಘಟನೆ ಮತ್ತಷ್ಟು ಬಲಗೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.


















































































































