ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ. ದ.ಕ ಜಿಲ್ಲಾ ಬ್ಯಾಡ್ಮಿoಟನ್ ಅಸೋಸಿಯೇಶನ್ ನ 2025-29ರ ಅವಧಿಗೆ ಅಧ್ಯಕ್ಷರಾಗಿರುವ ಅವರು ಕಳೆದ ವರ್ಷ ಮಂಗಳೂರಿನಲ್ಲಿ ಸಿಎಂ ಕಪ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಯಶಸ್ವಿಯಾಗಿ ಸಂಘಟಿಸಿದ್ದರು. ಅವರು ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವೀಧರರಾಗಿರುವ ಅವರು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಮಾಜಿ ಕಾರ್ಯದರ್ಶಿ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಚಾಲಕ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ದ.ಕ ಎನ್.ಎಸ್.ಯು.ಐ ಉಪಾಧ್ಯಕ್ಷ, ಎನ್.ಎಸ್.ಯು.ಐ ಮಂಗಳೂರು ನಗರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಉಳ್ಳಾಲ ನಿವಾಸಿ ರಾಘವ ಶೆಟ್ಟಿ ಮತ್ತು ವಿಟ್ಲದ ಸುಲೋಚನಾ ಅವರ ಪುತ್ರ ಸಂತೋಷ್ ಕುಮಾರ್ ಮಂಗಳೂರಿನಲ್ಲೇ ಓದಿ ಬೆಳೆದವರು. ಮಣ್ಣಗುಡ್ಡೆ ಸರ್ಕಾರಿ ಶಾಲೆ ಮತ್ತು ಕೆನರಾ ಹೈಸ್ಕೂಲ್ನಲ್ಲಿ ಓದಿದ ಅವರು ಸುಂಕದಕಟ್ಟೆ ನಿರಂಜನಸ್ವಾಮಿ ಪಾಲಿಟೆಕ್ನಿಕ್ನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪಡೆದಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಈಗ ಕೊಟ್ಟಾರದ ಇನ್ಫೊಸಿಸ್ ಬಳಿಯ ಕಲ್ಬಾವಿ ಒಂದನೇ ಕ್ರಾಸ್ ನಿವಾಸಿ. ಪತ್ನಿ ಸೌಮ್ಯಾ, ಇಬ್ಬರು ಗಂಡು ಮಕ್ಕಳಿದ್ದಾರೆ. ಮುಡಾ ಎಂದರೆ ಸಿಂಗಲ್ ಸೈಟ್ ನೀಡುವ ಸಂಸ್ಥೆ ಎಂಬ ಭಾವನೆ ಜನರಲ್ಲಿದೆ. ಅದನ್ನು ಇಲ್ಲದಾಗಿಸಿ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುವ ಕನಸು ಕಂಡಿದ್ದೇನೆ. ಇದಕ್ಕಾಗಿ ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಮುಡಾದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಈ ಕನಸು ನನಸಾಗಿಸಲು ಶ್ರಮಿಸುವೆ ಎಂದು ಅವರು ತಿಳಿಸಿದರು.


















































































































