ಬಂಟರ ಸಂಘ ಮುಂಬಯಿಯ ಸಿಟಿ ಪ್ರಾದೇಶಿಕ ಸಮಿತಿಯು ವಿಶಿಷ್ಟ ಪರಿಕಲ್ಪನೆಯೊಂದಿಗೆ ಭಜನಾ ಸತ್ಸಂಗವನ್ನು ಸಪರಿವಾರದೊಂದಿಗೆ ಈಗಾಗಲೇ ಸಮಾಜ ಬಾಂಧವ ಬಂಧುಗಳ ಮನೆಯಲ್ಲಿ ನಡೆಸಿಕೊಂಡು ಬಂದಿರುತ್ತದೆ. ಇದೀಗ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಂಗಳವನ್ನು ಆಡುವುದಕ್ಕೆ ಕುಣಿತ ಭಜನೆಯೊಂದಿಗೆ ಭಜನಾ ಮಂಗಳೋತ್ಸವ ಮಾಡಲು ನಿರ್ಧರಿಸಿದೆ. ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಈ ದೇವತಾ ಕಾರ್ಯವು ಆಗಸ್ಟ್ 29ರ ಶನಿವಾರ ಸಾಯಂಕಾಲ 3 ರಿಂದ ಸ್ವಾಮಿ ಮುಕ್ತಾನಂದ ಸಭಾಗೃಹ ಬಂಟರ ಭವನ ಕುರ್ಲಾ ಇಲ್ಲಿ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಸಿಟಿ ಪ್ರಾದೇಶಿಕ ಸಮಿತಿಯ ಮಾತೆ ಮಹನೀಯರ ಜುಗಲ್ ಬಂಧಿ ಕುಣಿತ ಭಜನೆ, ದೇವನಾಮ ಸಂಕೀರ್ತನೆಯೊಂದಿಗೆ ಭರತನಾಟ್ಯ ಶೈಲಿಯಲ್ಲಿ ಕುಣಿತ ಭಜನೆ, ಹಿರಿ- ಕಿರಿಯರಿಂದ ಸಾಮೂಹಿಕ ಕುಣಿತ ಭಜನೆ ನಡೆಯಲಿದೆ. ಕೊನೆಯಲ್ಲಿ ಮಹಾಪೂಜೆಯೊಂದಿಗೆ ಭಜನಾ ಮಂಗಳೋತ್ಸವ ನಡೆಯುವುದು.
ಇದೇ ಸಂದರ್ಭ ಶ್ರೀ ಸುಗುಣೇಂದ್ರ ಶ್ರೀಪಾದರು, ಜಗದ್ಗುರು ಶ್ರೀಮನ್ಮದಾಚಾರ್ಯ ಮೂಲ ಮಹಾ ಸಂಸ್ಥಾನ, ಶ್ರೀ ಮದುಪೇಂದ್ರತೀರ್ಥ ಪೀಠ, ಶ್ರೀ ಪುತ್ತಿಗೆ ಮಠ ಉಡುಪಿಯವರು ಆಶೀರ್ವಚನ, ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮುಂಬಯಿಯ ಖ್ಯಾತ ವೈದ್ಯ, ಬಂಟ್ಸ್ ಎಸೋಸಿಯೇಷನ್ ಆಫ್ ಡಾಕ್ಟರ್ಸ್ ನ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿಯವರು ಅವರು ಸತ್ಸಂಗದ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಸ್ತಿಕ ಬಂಧುಗಳು, ಭಜನೆ ಅಭಿಮಾನಿಗಳು ಎಲ್ಲರೂ ಆಗಮಿಸಬೇಕೆಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹಾಗೂ ಪದಾಧಿಕಾರಿಗಳು, ಮಹಿಳಾ ವಿಭಾಗದ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳು, ಸಿಟಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಅಶೋಕ್ ಪಕ್ಕಳ ಹಾಗೂ ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಎಸ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


















































































































