ಮುಂಬಯಿ ಮಹಾನಗರದ ಬಂಟ ಸಮಾಜದ ಪ್ರತಿಷ್ಠಿತ ಸೇವಾ ಸಂಸ್ಥೆ ಬಂಟರ ಸಂಘ ಮುಂಬಯಿಯ ಆಡಳಿತ ಸಮಿತಿಯಿಂದ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಅಡಿಟೋರಿಯಂನಲ್ಲಿ ಆಗಸ್ಟ್ 12 ರಂದು ಬುಧವಾರ ಪೂರ್ವಾಹ್ನ ವಿಶೇಷ ಮಹಾಸಭೆಯು ಜರಗಿತು. ವಿಶೇಷ ಮಹಾಸಭೆಯ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ವಹಿಸಿದ್ದರು. ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಮೇಶ್ ಬಿ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಮುಂಬರುವ ನವೆಂಬರ್ ನಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕಾರ್ಯಾವಧಿ ಸಮಾಪ್ತಿಗೊಳ್ಳಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಬಂಟರ ಸಂಘ ಮುಂಬಯಿಯ ರೂಲ್ಸ್ ಅಂಡ್ ರೆಗ್ಯುಲೇಷನ್ ನಲ್ಲಿ ಸುಮಾರು ಅನೇಕ ಬದಲಾವಣೆ ಮತ್ತು ಸೇರ್ಪಡೆಗಳನ್ನು ಮಾಡುವುದರ ಬಗ್ಗೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿಯವರು ವಿನಮ್ರವಾಗಿ ಪದಾಧಿಕಾರಿಗಳ ಮತ್ತು ಸಂಘದ ಸದಸ್ಯರ ಸಲಹೆ, ಸೂಚನೆ, ಅಭಿಪ್ರಾಯ, ಅನಿಸಿಕೆಗಳನ್ನು ಕೇಳಿದಾಗ ಅವರೆಲ್ಲರೂ ಸಂದರ್ಭೋಚಿತವಾಗಿ ಮಾತನಾಡಿ, ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸೂಕ್ತ ಉತ್ತರ, ಸಲಹೆ, ಸೂಚನೆಗಳನ್ನು ನೀಡಿದರು. ಈ ವಿಶೇಷ ಮಹಾಸಭೆಗೆ ಬಂಟರ ಸಂಘ ಮುಂಬಯಿಯ ಸದಸ್ಯರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಲಹೆ ನೀಡಿದ ಹಿರಿಯರನ್ನು, ಪದಾಧಿಕಾರಿಗಳನ್ನು ಅಧ್ಯಕ್ಷರು ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಪುಷ್ಪ ಗೌರವ ನೀಡಿ ಗೌರವಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿಯವರು ವಿಶೇಷ ಮಹಾಸಭೆಯನ್ನು ಸಮರ್ಪಕವಾಗಿ ನಿರ್ವಹಿಸಿ ಧನ್ಯವಾದಗೈದರು. ಕೊನೆಯಲ್ಲಿ ಪ್ರೀತಿ ಭೋಜನ ನಡೆಯಿತು.
ಚಿತ್ರ, ವರದಿ : ಗುರುದತ್ ಪೂಂಜ ಮುಂಡ್ಕೂರು














































































































