ಬಂಟರ ಸಂಘ ವಾಮದಪದವು ವಲಯದ ‘ಪದವುಡು ಆಟಿದ ಕೂಟ’ ಕಾರ್ಯಕ್ರಮವು ಆಗಸ್ಟ್ 2 ರ ಆದಿತ್ಯವಾರ ಸಂಘದ ಆಲದಪದವಿನ ನಿವೇಶನದಲ್ಲಿ ನಡೆಯಿತು. ಬೆಳಿಗ್ಗೆ 9.00 ಗಂಟೆಗೆ ಬಂಟರ ಸಂಘ ಬಂಟ್ವಾಳ ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಜಾತ ಪಿ ರೈಯವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಲಯ ಸಮಿತಿಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಾಮದಪದವು ವಲಯದ ಅಧ್ಯಕ್ಷರಾದ ವಸಂತ್ ಶೆಟ್ಟಿ ಕೇದಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಮುಂಡಡ್ಕಗುತ್ತು ಯಜಮಾನ ರತ್ನಾಕರ ಶೆಟ್ಟಿ ಮಾತನಾಡಿ, ಬಂಟ ಸಮುದಾಯದ ಒಗ್ಗಟ್ಟು, ಸಂಘಟನೆಯನ್ನು ಬಲ ಪಡಿಸುವ ಅಗತ್ಯತೆ ಬಗ್ಗೆ ವಿವರಿಸಿದರು. ಬಂಟರ ಸಂಘ ಬಂಟ್ವಾಳ ತಾಲೂಕು ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರು ಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳಿಗ್ಗೆ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಛದ್ಮವೇಷ ಮತ್ತು ನೃತ್ಯ ಸ್ಪರ್ಧೆಗಳು ನಡೆದವು. ಬೆಳಿಗ್ಗೆ 11.30 ರಿಂದ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಸ್ಥಾಪಕಾಧ್ಯಕ್ಷ ಅಮ್ಮು ರೈ ಹರ್ಕಾಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ ರಮಾನಾಥ ರೈಯವರು ಮಾತನಾಡಿ, ವಲಯದ ಭವನ ನಿರ್ಮಾಣಕ್ಕೆ ತನ್ನಿಂದಾಗುವ ಸಂಪೂರ್ಣ ಸಹಕಾರದ ಭರವಸೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಭಾಷಣಕಾರರಾಗಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆಯ ಪ್ರೊಫೆಸರ್ ಡಾ| ಸುಧಾರಾಣಿ ಆಟಿ ತಿಂಗಳಿನ ವಿಶೇಷತೆ, ಆ ಕಾಲದಲ್ಲಿ ನಮ್ಮ ಹಿರಿಯರು ಹೇಗೆ ಬದುಕು ಸಾಗಿಸಿದ್ದರು, ಈ ಕಾಲದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ, ಆಟಿ ತಿಂಗಳ ಮಹತ್ವ, ವಿಶೇಷತೆಗಳ ವಿವರ ನೀಡಿದರು.





ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿ, ನಮ್ಮ ಸಮಾಜದ ಏಳಿಗೆಗೆ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯೋಣ, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ಇರಲಿ. ಪ್ರಗತಿಯಲ್ಲಿರುವ ಪದವು ಬಂಟರ ಭವನಕ್ಕೆ ತಾವೆಲ್ಲರೂ ಪೂರ್ಣ ಸಹಕಾರ ನೀಡಿ ಎಂದರು. ಮುಖ್ಯ ಅತಿಥಿಗಳಾಗಿ ಪುಣಚ ಮಹಿಷಮರ್ಧಿನಿ ದೇವಸ್ಥಾನ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಬಂಟ್ವಾಳ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ, ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜೊತೆ ಕೋಶಾಧಿಕಾರಿ ಶ್ರೀಮತಿ ಶ್ರೀವಿದ್ಯಾ ಎ ರೈ, ಬಂಟರ ಸಂಘ ಕಾವಳಕಟ್ಟೆ ವಲಯದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ವಸಂತ್ ಶೆಟ್ಟಿ ಕಲಾಕುಂಜ, ಮಹಿಳಾ ವಿಭಾಗದ ಅಧ್ಯಕ್ಷೆ ಚೇತನಾ ರಾಮಚಂದ್ರ ಶೆಟ್ಟಿ ದಂಡೆ, ಯುವ ವಿಭಾಗದ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ ಗಂಟೆರಾಬೆಟ್ಟು ಗುತ್ತು ಮೊದಲಾದವರು ಉಪಸ್ಥಿತರಿದ್ದರು.

ವಲಯದ ಸ್ಥಾಪಕಾಧ್ಯಕ್ಷ ಅಮ್ಮು ರೈ ಹರ್ಕಾಡಿ ದಂಪತಿಗಳಿಗೆ 50ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಸಭಾ ವೇದಿಕೆಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಇವರ ಸನ್ಮಾನ ಪತ್ರವನ್ನು ಮಹಿಳಾ ವಿಭಾಗದ ಕೋಶಾಧಿಕಾರಿ ರೇಣುಕಾ ವಿ ರೈ ವಾಚಿಸಿದರು. ವಲಯದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 90% ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿವರವನ್ನು ಪ್ರದಾನ ಕಾರ್ಯದರ್ಶಿ ಗಂಗಾಧರ್ ಶೆಟ್ಟಿ ಕೋಡ್ಯೇಲು ಬಾಳಿಕೆ ನೀಡಿದರು. ರಕ್ಷಿತ್ ಶೆಟ್ಟಿ ಕೋಡ್ಯೇಲು ಪ್ರಾರ್ಥಿಸಿ, ಕೃತಿ ವಸಂತ್ ಶೆಟ್ಟಿ ಕೇದಗೆ ಸ್ವಾಗತಿಸಿ, ಯಶೋದರ ಶೆಟ್ಟಿ ದಂಡೆ ಧನ್ಯವಾದ ಸಲ್ಲಿಸಿದರು. ಉಪಾಧ್ಯಕ್ಷರಾದ ರಮೇಶ್ ಶೆಟ್ಟಿ ವಾಮದಪದವು ಕಾರ್ಯಕ್ರಮ ನಿರ್ವಹಿಸಿದರು. ಮದ್ಯಾಹ್ನ 1.30 ರಿಂದ ಆಟಿ ತಿಂಗಳ ವಿಶೇಷ ಖಾದ್ಯಗಳನ್ನೊಳಗೊಂಡ ಸಹ ಭೋಜನ ನಡೆಯಿತು.














































































































