ಬಂಟ ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಒಂದೇ ಮನಸ್ಸಿನಿಂದ ಸಂಘಟಿತರಾಗಿ ಸಮಾಜವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯ. ಹಿರಿಯರು ಕಟ್ಟಿಕೊಟ್ಟ ಪರಂಪರೆ, ಸಂಸ್ಕೃತಿ ಹಾಗೂ ಘನತೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಛೇರ್ಮನ್ ಡಾ. ಎಂ ಮೋಹನ ಆಳ್ವ ಹೇಳಿದರು. ಬಂಟರ ಸಂಘ ಮೂಡುಬಿದಿರೆಯ ಬಂಟರ ಮಹಿಳಾ ಘಟಕದ ಆಶ್ರಯದಲ್ಲಿ ಭಾನುವಾರ ಆಳ್ವಾಸ್ ಕ್ಯಾಂಪಸ್ ನ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆದ ನಾಲ್ಕನೇ ವರ್ಷದ “ಆಟಿಡೊಂಜಿ ದಿನ -2026” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಆಟಿಡೊಂಜಿ ದಿನ’ ಅಲಂಕಾರ, ಸಾಂಪ್ರದಾಯಕ ಉಡುಪು ಮತ್ತು ಆಚರಣೆ ಸೀಮಿತವಾಗದೇ, ಹಿಂದಿನ ಕಾಲದ ಕಷ್ಟ ನೋವುಗಳು, ತುಳು ಭಾಷೆ, ಆಚಾರ ವಿಚಾರ, ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಉದ್ದೇಶ ಹೊಂದಿರಬೇಕು ಎಂದರು. ಸಮಾಜದ ಬಡ ಹಾಗೂ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೆರವು ನೀಡುವುದು ಪ್ರಮುಖ ಉದ್ದೇಶವಾಗಿದ್ದು, ಇಂತಹ ಕಾರ್ಯಗಳಿಗೆ ಆಳ್ವಾಸ್ ಸಂಸ್ಥೆಯ ಸಹಕಾರ ಸದಾ ಇರಲಿದೆ. ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜಿನ ಮೂಲಕವೂ ಕಾರ್ಯ ನಡೆಯುತ್ತಿದೆ ಎಂದರು. ಮಹಿಳೆಯರು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು ಸಂತಸದ ಸಂಗತಿ. ಪುರುಷರು ಹೆಚ್ಚಿನ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಮೂಡುಬಿದಿರೆ ಹಾಗೂ ಆಸುಪಾಸಿನಲ್ಲಿ ಬಂಟ ಸಮಾಜವನ್ನು ಗಟ್ಟಿಯಾಗಿ, ಪ್ರೀತಿಯಿಂದ ಮತ್ತು ಆದರ್ಶವಾಗಿ ಕಟ್ಟುವ ಕಾರ್ಯ ನಿರಂತರವಾಗಿರಲಿ ಎಂದು ಹೇಳಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ ವಹಿಸಿದ್ದರು. ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಉಪಸ್ಥಿತರಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ವಿಜಯಲಕ್ಷ್ಮೀ ಪ್ರಸಾದ್ ರೈ ಆಷಾಢದ ನುಡಿ ನೀಡಿದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸಮಾಜ ಸೇವಕ ಪ್ರಸಾದ್ ರೈ ಕಲ್ಲಿಮಾರ್, ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ದಿವಾಕರ ಸಾಮಾನಿ, ಬಂಟರ ಸಂಘ ಮೂಡುಬಿದಿರೆಯ ಕಾರ್ಯದರ್ಶಿ ಸುಚರಿತ ಶೆಟ್ಟಿ, ಕೋಶಾಧಿಕಾರಿ ಪುರುಷೋತ್ತಮ್ ಶೆಟ್ಟಿ, ಯುವ ಬಂಟರ ಘಟಕದ ಅಧ್ಯಕ್ಷ ಸಂದೀಪ್ ಶೆಟ್ಟಿ ಬೆಳುವಾಯಿ ಭಾಗವಹಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಸಂಗೀತಾ ಶೆಟ್ಟಿ, ಕೋಶಾಧಿಕಾರಿ ಗೀತಾ ಪಿ ಶೆಟ್ಟಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. 75 ವರ್ಷ ಪೂರೈಸಿದ ಡಾ. ಎಂ ಮೋಹನ ಆಳ್ವ, ಧಾರ್ಮಿಕ ಸಾಮಾಜಿಕ ಮುಖಂಡ ಬಿ. ಜಯರಾಜ್ ಹೆಗ್ಡೆ ಹಾಗೂ ಮಂಗಳೂರು ಬಂಟರ ಸಂಘದ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಶೋಭಾ ಎಸ್. ಹೆಗ್ಡೆ ಅವರನ್ನು ಈ ಸಂಧರ್ಭ ಸನ್ಮಾನಿಸಲಾಯಿತು.


ಎಂಬಿಬಿಎಸ್ ಪೂರ್ಣಗೊಳಿಸಿದ ಭುವನ್ ವೈಷ್ಣವ್ ಮಾರ್ಲ ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ| ಮಲ್ಲಿಕಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ರೋಹಿಣಿ ಶೆಟ್ಟಿ ವರದಿ ವಾಚಿಸಿದರು. ಶಿವಪ್ರಸಾದ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ರಂಜಿತಾ ಎ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






















































































































