ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (KRMSS), ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 6ರಂದು ಕಾಲೇಜಿನ ಸಭಾಂಗಣದಲ್ಲಿ ಸಂತ ರವಿದಾಸ್ ಅವರ 650ನೇ ಜನ್ಮ ಜಯಂತಿ ಅಂಗವಾಗಿ ‘ಭಾರತೀಯ ಸಂತ ಪರಂಪರೆ – ಉಪನ್ಯಾಸ ಮಾಲೆ’ ಕಾರ್ಯಕ್ರಮ ಜರುಗಿತು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ವಿದ್ವಾಂಸ ಭಾಸ್ಕರ ರೈ ಕುಕ್ಕುವಳ್ಳಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ನಮ್ಮದು ಸಂತ ಮಹಾಂತರ ದೇಶ. ಕೃಷಿ ಮತ್ತು ಋಷಿ ಸಂಸ್ಕೃತಿ ಭಾರತದ ಆತ್ಮ. ಭಾರತೀಯ ಪುರಾಣ ಇತಿಹಾಸಗಳಲ್ಲಿ ಖ್ಯಾತರಾದ ಅನೇಕ ಸಾಧು ಸಂತರ ಚಿಂತನೆಗಳು ಸಮಾಜದಲ್ಲಿ ಸಮಾನತೆ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದು ತಿಳಿಸಿದರು.





ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಸುಮಾ ಟಿ.ಆರ್ ಭಾರತೀಯ ಸಂತ ಪರಂಪರೆ ವಿಷಯದ ಕುರಿತು ಹಿಂದಿಯಲ್ಲಿ ಉಪನ್ಯಾಸ ನೀಡಿ, ಸಂತ ರವಿದಾಸ್ ಅವರ ಜೀವನ, ಭಕ್ತಿ ಚಳವಳಿ, ಸಾಮಾಜಿಕ ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶವನ್ನು ನೀಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಡಾ| ಭಾನುಪ್ರಕಾಶ್ ಟಿ.ಆರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಭಾರತೀಯ ಸಂಸ್ಕೃತಿ ಮತ್ತು ಸಂತ ಪರಂಪರೆಯ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ದ.ಕ ಜಿಲ್ಲಾ ಘಟಕದ ಸಂಚಾಲಕ ಡಾ. ಮಾಧವ ಎಂ.ಕೆ ಉಪಸ್ಥಿತರಿದ್ದರು.
ಕೆ.ಆರ್.ಎಂ.ಎಸ್ ಎಸ್ ನ ಜಿಲ್ಲಾ ಉಪಾಧ್ಯಕ್ಷೆ ಡಾ. ನಾಗರತ್ನ ರಾವ್ ಪ್ರಸ್ತಾವನೆಗೈದು, ಭಾರತೀಯ ಸಂತ ಪರಂಪರೆಯ ಮಹತ್ವ ಹಾಗೂ ಸಂತ ರವಿದಾಸ್ ಅವರ ಜೀವನ ಸಂದೇಶವನ್ನು ಪರಿಚಯಿಸಿದರು. ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕಿ ಡಾ. ಜ್ಯೋತಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ಫೂರ್ತಿ ಶೆಟ್ಟಿ ಪ್ರಾರ್ಥಿಸಿ, ಲಿನಿಷಾ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ಕು. ದೃಶ್ಯಾ ವಂದನಾರ್ಪಣೆ ಸಲ್ಲಿಸಿದರು. ಸನಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು.






















































































































