ತುಳುನಾಡಿನ ಸಂಸ್ಕೃತಿಯು ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದೆ. ಇಲ್ಲಿಯ ಜೀವನ ಪದ್ಧತಿ, ಭೂತಾರಾಧನೆ, ಕಲೆ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮೆರುಗನ್ನು ನೀಡಿದೆ. ವರ್ಷಪೂರ್ತಿ ಉತ್ಸವ, ಜಾತ್ರೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನರು ಸಂಸ್ಕಾರದ ಜೀವನವನ್ನು ನಡೆಸುತ್ತಿದ್ದಾರೆ. ತುಳು ಸಂಸ್ಕೃತಿಯಲ್ಲಿ ಆಟಿ ತಿಂಗಳಿಗೆ ತನ್ನದೇ ಆದ ಮಹತ್ವವನ್ನು ನೀಡಿದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರು ಹೇಳಿದರು. ಅವರು ಆಗಸ್ಟ್ 1 ರಂದು ನವಿ ಮುಂಬಯಿಯ ಜೂಯಿನಗರದಲ್ಲಿರುವ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗ ಆಯೋಜಿಸಿದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂಬಯಿಯಲ್ಲಿರುವ ತುಳುನಾಡಿನವರು ಹಿರಿಯರು ಆಚರಿಸುತ್ತಿದ್ದ ಆಚಾರ ವಿಚಾರಗಳನ್ನು, ನಮ್ಮ ಜೀವನ ಪದ್ಧತಿಯನ್ನು ಎಂದಿಗೂ ಮರೆಯಬಾರದು. ಯುವ ಪೀಳಿಗೆಗೆ ಅದರ ಬಗ್ಗೆ ಅರಿವು ಮೂಡಿಸಬೇಕು ಎಂಬ ದೃಷ್ಟಿಯಿಂದ ಇಲ್ಲಿ ಆಟಿ ತಿಂಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಬಾಂಬೆ ಬಂಟ್ಸ್ ಅಸೋಸಿಯೇಷನ್ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ವಿಶೇಷವಾಗಿ ಪ್ರಯತ್ನಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜವಾಬ್ ಸಂಸ್ಥೆಯ ಮಹಿಳಾ ವಿಭಾಗದ ಸ್ಥಾಪಕ ಕಾರ್ಯಾಧ್ಯಕ್ಷೆ ಶ್ವೇತಾ ಜ್ಯೋತಿಪ್ರಕಾಶ್ ಹೆಗ್ಡೆಯವರು ಮಾತನಾಡಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗ ಶಾಂತಾ ಎನ್ ಶೆಟ್ಟಿ ಅವರ ನೇತೃತ್ವದಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಸಂಸ್ಕೃತಿ ಸಂಸ್ಕಾರವನ್ನು ತಿಳಿಯಪಡಿಸುವ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ. ಇವತ್ತು ಮಹಿಳಾ ವಿಭಾಗದ ಸದಸ್ಯರು ಪ್ರದರ್ಶಿಸಿದ ನಾಟಕ ಅತ್ಯುತ್ತಮವಾಗಿ ಮೂಡಿ ಬಂದಿದೆ. ಇಂತಹ ನಮ್ಮ ಪುರಾಣದ ಕಥೆಗಳನ್ನು ಅವಲಂಬಿಸಿದ ನಾಟಕಗಳು ಇನ್ನಷ್ಟು ಪ್ರದರ್ಶನಗೊಳ್ಳಬೇಕು ಎಂದರು. ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಜವಾಬ್ ನ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುನಿತಾ ವೆಂಕಟೇಶ್ ಶೆಟ್ಟಿ ಅವರು ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ನಾವು ಸಕ್ರಿಯರಾಗಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಶಾಂತಾ ನಾರಾಯಣ ಶೆಟ್ಟಿ ಅವರು ಸದಾ ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಸಮಾಜ ಸೇವಕಿ ವಿಮಲಾ ಎ ಶೆಟ್ಟಿ ಘಾಟ್ಕೋಪರ್ ಅವರು ಮಾತನಾಡಿ, ನಮ್ಮ ಸನಾತನ ಧರ್ಮದ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕಾಗಿದೆ. ಹಿಂದೂಗಳ ಜನಸಂಖ್ಯೆ ಹೆಚ್ಚಾದಾಗ ಮಾತ್ರ ನಮ್ಮ ದೇಶ ಸನಾತನ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವು ಗಮನ ಹರಿಸಬೇಕು ಎಂದರು. ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಎಸ್ ಶೆಟ್ಟಿ ಅವರು ಮಾತನಾಡಿ, ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿ ಕಡೆಗೆ ಕೆಲಸ ಮಾಡಬೇಕು ಹಾಗೂ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಶೀಲರಾಗಬೇಕು ಎಂದರು.







ಇದೇ ಸಂದರ್ಭದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಾರದಾ ಶ್ಯಾಮ್ ಶೆಟ್ಟಿ ಮತ್ತು ತೇಜಾಕ್ಷಿ ಸುರೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾರದಾ ಶೆಟ್ಟಿಯವರು, ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗ ಅತ್ಯಂತ ಕ್ರಿಯಾಶೀಲವಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸಿಕೊಂಡು ಬರುತ್ತಿದ್ದು, ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು. ಮಾಜಿ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ ಅವರು ಮಾತನಾಡಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ನಮ್ಮ ಪೂರ್ವಜರು ಕಟ್ಟಿದ ಮನೆ. ಇಲ್ಲಿ ಎಲ್ಲರೂ ಒಗ್ಗಟ್ಟಿನಿಂದ, ಸಂತೋಷದಿಂದ ಸಮಾಜದ ಸೇವೆಯನ್ನು ಮಾಡುತ್ತಾರೆ. ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು. ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ಅವರು ಮಾತನಾಡಿ, ಇಂದಿನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲು ಸಹಕರಿಸಿದ ಎಲ್ಲಾ ಮಹನೀಯರಿಗೆ ಕೃತಜ್ಞತೆಯನ್ನು ಸಲ್ಲಿಸಿ, ನಮ್ಮ ಹಿರಿಯರು ಆಟಿ ತಿಂಗಳಲ್ಲಿ ತುಂಬಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಆದರೆ ನಾವು ನಡೆದು ಬಂದ ದಾರಿಯನ್ನು ಹಾಗೂ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮರೆಯಬಾರದು ಎಂಬ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮುಂದಿನ ಪೀಳಿಗೆಗೆ ತುಳುನಾಡಿನ ಚರಿತ್ರೆ, ಸಂಸ್ಕೃತಿಯ ಬಗ್ಗೆ ತಿಳಿಯಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ನಮ್ಮ ಈ ಕಾರ್ಯಕ್ರಮಕ್ಕೆ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆ ಶೆಟ್ಟಿ, ಸರ್ವ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ತುಂಬು ಹೃದಯದ ಸಹಕಾರವನ್ನು ನೀಡಿದ್ದು, ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.





ಈ ಸಂದರ್ಭದಲ್ಲಿ ರಂಗ ನಿರ್ದೇಶಕರಾದ ನಾರಾಯಣ ಶೆಟ್ಟಿ ನಂದಳಿಕೆ, ಮನೋಹರ್ ಶೆಟ್ಟಿ ನಂದಳಿಕೆ, ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ಡಿಪ್ಲೋಮಾ ಕೋರ್ಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಶೆಟ್ಟಿ, ಘನ್ಸೋಲಿಯ ನಿವಾಸಿಗಳಾದ ಅರುಣ್ ಜಿ ಶೆಟ್ಟಿ ಮತ್ತು ಸವಿತಾ ಶೆಟ್ಟಿ ಅವರ ಪುತ್ರ ಎಚ್.ಎಸ್.ಸಿ ವಿಜ್ಞಾನ ವಿಭಾಗ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ದಿವಿತ್ ಅರುಣ್ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾದ ಸಮಾಜ ಸೇವಕಿ ಮನೋರಮಾ ಎಸ್ ಶೆಟ್ಟಿ, ಉದ್ಯಮಿ ತಾರನಾಥ್ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸಹಾನಿ ವಿ ಶೆಟ್ಟಿ, ಕಾರ್ಯದರ್ಶಿ ಉಷಾ ಆರ್ ಶೆಟ್ಟಿ, ಕೋಶಾಧಿಕಾರಿ ನಾಗವೇಣಿ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಮಾಯಾ ಎಸ್ ಆಳ್ವ, ಜೊತೆ ಕೋಶಾಧಿಕಾರಿ ಉಮಾ ಕೆ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಮಾಯಾ ಆಳ್ವ ವಂದಿಸಿದರು. ನಂದಳಿಕೆ ನಾರಾಯಣ ಶೆಟ್ಟಿ ಹಾಗೂ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ರಂಗ ನಿರ್ದೇಶಕರಾದ ನಾರಾಯಣ ಶೆಟ್ಟಿ ನಂದಳಿಕೆ ಅವರು ರಚಿಸಿದ ಮನೋಹರ್ ಶೆಟ್ಟಿ ನಂದಳಿಕೆ ಅವರ ನಿರ್ದೇಶನದಲ್ಲಿ ಪೌರಾಣಿಕ ತುಳು ನಾಟಕ ‘ಬುಡಿ ಪಗರಿ ಬುಡಾಯೆ’ ಎಂಬ ನಾಟಕವು ಪ್ರದರ್ಶನಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.























































































































