ಪ್ರತಿ ವ್ಯಕ್ತಿಯ ಯಶಸ್ಸಿಗೆ ಗುರು ಮತ್ತು ಗುರಿ ಮುಖ್ಯ. ಬದುಕಿನಲ್ಲಿ ಹಿರಿಯರ ಮೌಲ್ಯಗಳೇ ಗುರು. ಯುವ ಸಮುದಾಯದ ಅಭ್ಯುದಯವೇ ಗುರಿ. ಆ ಮೂಲಕ ಸಮಾಜದ ‘ಪ್ರಗತಿ’ಯೇ ಆಳ್ವಾಸ್ ಆಶಯ. ಅದರ ಯಶಸ್ಸಿಗೆ ಸಮುದಾಯಗಳ ಸಹಭಾಗಿತ್ವ ಅತ್ಯಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯಲ್ಲಿ ಆಗಸ್ಟ್ 7 ಮತ್ತು 8 ರಂದು ನಡೆಯಲಿರುವ ಬೃಹತ್ ಉಚಿತ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ -2026’ರ ಪೂರ್ವಭಾವಿಯಾಗಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡ ‘ನಾಯಕತ್ವ ಸಮ್ಮಿಲನ’ವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಸಮುದಾಯ, ಧಾರ್ಮಿಕ, ರಾಜಕೀಯ ಸೇರಿದಂತೆ ಹಲವಾರು ಸಂಘಟನೆಗಳ ಪ್ರಮುಖರ ಜೊತೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಔದ್ಯೋಗಿಕ ಅವಕಾಶ ಕಲ್ಪಿಸುವ ಮೂಲಕ ಅವರನ್ನು ಸಾಮಾಜಿಕ, ಆರ್ಥಿಕವಾಗಿ ಸಶಕ್ತೀಕರಣಗೊಳಿಸಲು ‘ಆಳ್ವಾಸ್ ಪ್ರಗತಿ’ಯು 19 ವರ್ಷಗಳ ಹಿಂದೆ ಕೇವಲ 38 ಉದ್ಯೋಗದಾತ ಕಂಪೆನಿಗಳ ಮೂಲಕ ಆರಂಭಗೊಂಡಿದ್ದು, ಪ್ರಸ್ತುತ 300ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಳ್ಳುವ ವರೆಗೆ ಬೆಳೆದು ಬಂದಿದೆ. ಈ ಹಾದಿಯಲ್ಲಿ ಆಳ್ವಾಸ್ ಜೊತೆ ಸಮಾಜದ ಮುಖಂಡರು, ಯುವಜನರ ಕೊಡುಗೆ ಬಹುದೊಡ್ಡದು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಕಿರಿಯ ಮತ್ತು ಹಿರಿಯ ತಲೆಮಾರುಗಳನ್ನು ಬೆಸೆಯುವ ಕಾರ್ಯವನ್ನು ನಾವು ಮಾಡಬೇಕಾಗಿದೆ. ಆ ಮೂಲಕ ಕುಟುಂಬಗಳು, ಸಮಾಜ ಸೇರಿದಂತೆ ದೇಶದ ಅಭಿವೃದ್ಧಿ ಸಾಧ್ಯ. ‘ಆಳ್ವಾಸ್ ಪ್ರಗತಿ’ಯೂ ‘ಮೌಲ್ಯ’ ಮತ್ತು ‘ಸಾಮರ್ಥ್ಯ’ದ ಸಮಾಗಮದಂತೆ ಹಿರಿಯ ಕಿರಿಯ ತಲೆಮಾರುಗಳ ನಡುವಿನ ಸೇತುವೆೆ ಎಂದರು. ಸುಮಾರು 800ರಷ್ಟು ಮಾನವ ಸಂಪನ್ಮೂಲ ಅಧಿಕಾರಿಗಳು ಬಂದು, ಯಾವುದೇ ಮಧ್ಯವರ್ತಿಗಳ, ಲಾಬಿಗಳ ಸಂಪರ್ಕ ಇಲ್ಲದೇ ನೇರ ನೇಮಕಾತಿ ಮಾಡುವ ಪಾರದರ್ಶಕ ವ್ಯವಸ್ಥೆಯನ್ನು ‘ಆಳ್ವಾಸ್ ಪ್ರಗತಿ’ ರೂಪಿಸಿದೆ. ಅತ್ಯುತ್ತಮ ಕಂಪೆನಿಗಳು ವಿದ್ಯಾರ್ಥಿಗಳ ಬಳಿ ಬರುವಂತಾಗಬೇಕು. ಸರ್ಕಾರಿ, ಗ್ರಾಮೀಣ ಸೇರಿದಂತೆ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು ಎಂದು ಆಶಯ ವ್ಯಕ್ತಪಡಿಸಿದರು.



ಉದ್ಯೋಗವು ಕೇವಲ ಇಂಗ್ಲಿಷ್ ಬಲ್ಲವರಿಗೆ, ವಿದ್ಯಾರ್ಥಿಗಳಿಗೆ, ಸ್ನಾತಕ ಸ್ನಾತಕೋತ್ತರ ಪದವೀಧರರಿಗೆ ಮಾತ್ರ ಎಂಬ ಭ್ರಮೆ ಬೇಡ. ‘ಆಳ್ವಾಸ್ ಪ್ರಗತಿ’ಯಲ್ಲಿ ಸಂವಹನದಷ್ಟೇ, ಸಾಮರ್ಥ್ಯವನ್ನು ಆಧರಿಸಿ ನೇಮಕಾತಿ ಮಾಡುವ ಕಂಪೆನಿಗಳೂ ಬರುತ್ತವೆ. ಎಸ್ಸೆಸ್ಸೆಲ್ಸಿಯಿಂದ ಅತ್ಯುನ್ನತ ಪದವಿ, ಅನುಭವಿಗಳಿಗೂ ಉದ್ಯೋಗಗಳಿವೆ. ಎಲ್ಲರಿಗೂ ಉಚಿತ ಹಾಗೂ ಮುಕ್ತ ಸ್ವಾಗತ. ಸಮುದಾಯದ ಮುಖಂಡರ ಬೆಂಬಲದ ಮೂಲಕ ಎಲ್ಲಾ ಅರ್ಹ ಆಕಾಂಕ್ಷಿಗಳು ಉದ್ಯೋಗ ಪಡೆಯುವಂತೆ ಆಗಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ‘ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ’ಯ ಶೈಕ್ಷಣಿಕ ಪರಿಕಲ್ಪನೆ ಅಡಿಯಲ್ಲಿ ‘ಆಳ್ವಾಸ್’ ಸಾಗಿ ಬಂದಿದೆ. ಶಿಕ್ಷಣ ಉದ್ಯೋಗ ದೊರಕಿ, ಜೀವನದಲ್ಲಿ ಯಶಸ್ವಿಯಾಗಿರುವ ಹಲವರ ಯಶೋಗಾಥೆಗಳೇ ನಮ್ಮ ಸಂಭ್ರಮ ಎಂದು ನಿದರ್ಶನಗಳನ್ನು ನೀಡಿದರು. ಪ್ರಾಧ್ಯಾಪಕ ವಿನಾಯಕ ಗಾಳಿಮನೆ ಕಾರ್ಯಕ್ರಮ ನಿರೂಪಿಸಿದರು.




















































































































